ಬೆಂಗಳೂರು ಗ್ರಾಮಾಂತರ ಜಿಲ್ಲೆ: ಭೀಕರ ವಿಮಾನ ಅಪಘಾತದಲ್ಲಿ (Plane crash) ದುರ್ಮರಣಕ್ಕೀಡಾಗಿ ಗಾಯಗೊಂಡ ಗಾಯಾಳುಗಳ ರೋಧನ ಮುಗಿಲುಮುಟ್ಟಿತ್ತು, ಕೈ ಕಾಲುಗಳನ್ನು ಕಳೆದುಕೊಂಡವರ ಗೋಳು ಹೇಳತೀರದು, ನೂರಾರು ಭವಿಷ್ಯದ ಕನಸುಗಳನ್ನು ಹೊತ್ತ ತರುಣ ತರುಣಿಯರು ಆಘಾತಕ್ಕಿಂತ ಭವಿಷ್ಯದ ಚಂತೆಯಲ್ಲಿ ಬಿದ್ದಿದ್ದರು. ಜೀವ ರಕ್ಷಕ ಸಿಬ್ಬಂದಿ ಗಾಯಾಳುಗಳ ಬದುಕಿಸಲು ಹರಸಾಹಸ ಪಡುತಿದ್ದರು. ಅಗ್ನಿಶಾಮಕ, ಆಂಬುಲೆನ್ಸ್, ಎಸ್.ಡಿ.ಆರ್.ಎಪ್, ಎನ್.ಡಿ.ಆರ್.ಎಪ್ ತಂಡಗಳು, ವೈದ್ಯಕೀಯ ನೆರವಿನಲ್ಲಿ ಸದ್ದಿಲ್ಲದೆ ತೊಡಗಿದ್ದರು.
ಗಾಯಾಳುಗಳನ್ನ ದೇವನಹಳ್ಳಿ ಮುನ್ಸಿಪಲ್ ಹಾಸ್ಪಿಟಲ್ ಹಾಗೂ ಸಾವಿಗೀಡಾದವರ ದೇಹಗಳನ್ನು ಆಕಾಶ್ ಆಸ್ಪತ್ರೆ ಗೆ ಸಾಗಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಹಯೋಗದಲ್ಲಿ ವಿಮಾನ ದುರಂತಗಳನ್ನು ತಡೆಗಟ್ಟುವ ಸಂಬಂಧ ಸೋಮವಾರ ಚಾಣಕ್ಯ ವಿಶ್ವವಿದ್ಯಾಲಯ ಕ್ಯಾಂಪಸ್, ದೇವನಹಳ್ಳಿ ಇಲ್ಲಿ ಚಾಲೆಂಜರ್ ’26 ಸರಣಿಯ ಅಡಿಯಲ್ಲಿ ಪೂರ್ಣ ಪ್ರಮಾಣದ ವಿಮಾನ ಅಪಘಾತ ಕುರಿತು ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.
ಈ ಅಣಕು ಪ್ರದರ್ಶನದಲ್ಲಿ ನೈಜ ಘಟನೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಹೊರಡುವ ನಾಗರಿಕ ದೇಶೀಯ ವಿಮಾನವು ಟೇಕ್-ಆಫ್ ನಂತರ ವಿಮಾನ ನಿಲ್ದಾಣದ ಸುತ್ತಮುತ್ತಲಿನ ತಾಂತ್ರಿಕ ವೈಫಲ್ಯದಿಂದಾಗಿ ಚಾಣಕ್ಯ ವಿಶ್ವವಿದ್ಯಾಲಯದ ಮೈದಾನದ ಬಳಿ ಬೆಳಿಗ್ಗೆ 11.15 ರ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಯಿತು.
ತಕ್ಷಣವೇ ಚಾಣಕ್ಯ ವಿಶ್ವವಿದ್ಯಾಲಯದ ಸ್ಥಳೀಯ ಸಿಬ್ಬಂದಿಗಳು ಹತ್ತಿರದ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಿದರು. ನಂತರ ಡಿಡಿಎಂಎ, ಕೆಎಸ್‌ಎಫ್‌ಇಎಸ್, ಡಿಎಚ್‌ಒ, ಪೊಲೀಸ್ ಎಲ್ & ಒ, ಸಂಚಾರ ಪೊಲೀಸ್, ನಾಗರಿಕ ರಕ್ಷಣಾ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪರಿಣಾಮ ಬೀರುವ ವಿಮಾನಯಾನ ಸಂಸ್ಥೆಗಳು (ಏರ್ ಇಂಡಿಯಾ ಎಕ್ಸ್‌ಪ್ರೆಸ್) ಮತ್ತು ಬಿಐಎಎಲ್ ಸೇರಿದಂತೆ ತುರ್ತು ಪ್ರತಿಕ್ರಿಯೆ ನೀಡುವವರನ್ನು ತ್ವರಿತವಾಗಿ ಸಂಪರ್ಕಿಸಿ ಘಟನಾ ಸ್ಥಳಕ್ಕೆ ನಿಯೋಜಿಸಲಾಯಿತು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ತಕ್ಷಣವೇ ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಘಟನಾ ಸ್ಥಳಕ್ಕೆ ಆಗಮಿಸಿ, ಎಲ್ಲಾ ಇಲಾಖೆ ಹಾಗೂ ಏಜೆನ್ಸಿಗಳನ್ನು ಸಮನ್ವಯಗೊಳಿಸಿ ಕೂಡಲೇ ತ್ವರಿತ ರಕ್ಷಣಾ ಕಾರ್ಯಾಚರಣೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚನೆ ನೀಡಿದರು.
ವಿಮಾನ ಅಪಘಾತ ದುರಂತದಲ್ಲಿ ವಿಮಾನದಲ್ಲಿನ ಸಿಬ್ಬಂದಿ ಸೇರಿ ಒಟ್ಟು 46 ಪ್ರಯಾಣಿಕರು ಇದ್ದರು, ವಿಮಾನ ಅಪಘಾತವಾದ ನಂತರ ಒಬ್ಬ ಪುರುಷ, ಒಬ್ಬ ಮಹಿಳೆ, ಒಬ್ಬ ಬಾಲಕ ಸೇರಿ ಮೂವರು ಮೃತಪಟ್ಟಿದ್ದರು. ಅತೀ ತೀವ್ರ ಗಾಯಗೊಂಡವರು 20 ಪ್ರಯಾಣಿಕರು, ತೀವ್ರ ಗಾಯಗೊಂಡವರು 17, ಸಾಧಾರಣ ಗಾಯಗೊಂಡವರು 09 ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ಮೂವರಿದ್ದರು.
ಇದು ಕೇವಲ ಅಣುಕು ಪ್ರದರ್ಶನವಾಗಿದ್ದು, ಗುಜರಾತ್ ನಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆಯಲ್ಲಿ, ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಅಣುಕು ಪ್ರದರ್ಶನ ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿ ಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅಣುಕು ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ. ಅಣುಕು ಪ್ರದರ್ಶನವು ಯಶಸ್ವಿಯಾಗಿ ಜರುಗಿತು.
ಈ ಸಂಧರ್ಭದಲ್ಲಿ ಎಸ್ಪಿ ಚಂದ್ರಕಾಂತ್ ಎಂ.ವಿ, ಡಿವೈಎಸ್ಪಿ ಪಾಂಡುರಂಗ, ಡಿಹೆಚ್ಒ ಡಾ. ಲಕ್ಕಾ ಕೃಷ್ಣ ರೆಡ್ಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾದ ಡಾ. ದೇವಾಸಿಯಾ, ನಿತಿನ್ ಸಾವಂತ್, ರಘುವೀರ್, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಪೊಲೀಸ್, ಆರೋಗ್ಯ ಸಿಬ್ಬಂದಿ, ಉಪಸ್ಥಿತರಿದ್ದರು.
ಸಹಕಾರದಿಂದ ವಿಪತ್ತು ನಿರ್ವಹಣೆ ಸಾಧ್ಯ
ಯಾವುದೇ ವಿಪತ್ತು ಸಂಭವಿಸಿದಾಗ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು, ಭಾಗಿದಾರರು ಸರ್ವ ಸನ್ನದ್ಧರಾಗಿರಬೇಕು, ಇಲಾಖೆ ಹಾಗೂ ಭಾಗಿದಾರರ ಸಮನ್ವಯತೆ, ಸಹಕಾರದಿಂದ ವಿಪತ್ತು ನಿರ್ವಹಣೆ ಸಾಧ್ಯ, ಅಣುಕು ಪ್ರದರ್ಶನ ಏರ್ಪಡಿಸುವುದರಿಂದ ಎಲ್ಲರು ಘಟನೆಗಳ ಬಗ್ಗೆ, ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ತಿಳಿದುಕೊಳ್ಳಬಹುದು; ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

