ದೊಡ್ಡಬಳ್ಳಾಪುರ; ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ನಗರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ (Sobhayatre) ಅನುಮತಿ ಇಲ್ಲದೆ ಡಿಜೆ (DJ) ಬಳಸಿದ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ತಿಳಿದು ಬಂದಿದೆ.

ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಶ್ವ ಹಿಂದೂ ಪರಿಷದ್ ಭಜರಂಗದಳದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು, ದೊಡ್ಡಬಳ್ಳಾಪುರ ಶ್ರೀರಾಮೋತ್ಸವ ಯಾತ್ರೆ ವೇಳೆ ಡಿಜೆ ಬಳಸಿದ್ದಕ್ಕಾಗಿ 9 ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನೆರವು ನೀಡಿದ ವಕೀಲರಾದ ಗಿರೀಶ್ ಭಾರದ್ವಾಜ್ ಅವರಿಗೆ ಧನ್ಯವಾದಗಳು ಎಂದು ಬರೆದಿದೆ.

ಹಿನ್ನಲೆ
ಪ್ರತಿ ವರ್ಷದಂತೆಯೇ ಮಾರ್ಚ್ 29 ರಂದು ಡಿ.ಜೆಗೆ ಅನುಮತಿ ನೀಡದೆ ಧ್ವನಿವರ್ಧಕಗಳ ಬಳಕೆಗೆ ಮಾತ್ರ ಅನುಮತಿ ನೀಡಲಾಗಿತು. ಆದರೆ ಡಿಜೆ ಸೌಂಡ್ಸ್ ಬಳಸುವುದನ್ನು ನಿಷೇಧಿಸಿರುವ ಆದೇಶ ಉಲ್ಲಂಘಿಸಿ ಡಿಜೆ ಬಳಕೆ ಮಾಡಿರುವ ಆರೋಪದ ಬಜರಂಗದಳದ ಕಾರ್ಯಕರ್ತರು, ಡಿಜೆ ಮಾಲೀಕ, ವಾಹನಗಳ ಮಾಲೀಕ ಹಾಗೂ ಚಾಲಕರು ಸೇರಿ 9 ಜನರ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರತಿಭಟನೆ
ಇದಕ್ಕೂ ಮುನ್ನ ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್ ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಖಂಡಿಸಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಮುಂದೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಶ್ರೀರಾಮ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಪಾಂಡುರಂಗ ಅವರ ಸಮ್ಮುಖದಲ್ಲಿ ಶಾಸಕ ಧೀರಜ್ ಮುನಿರಾಜು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ‘ಡಿಜೆ ಬಳಸದೆ ಶೋಭಾಯಾತ್ರೆಯಲ್ಲಿ ಧ್ವನಿ ವರ್ಧಕಗಳನ್ನು ಮಾತ್ರ ಬಳಸಬೇಕು’ ಎಂದು ಪೊಲೀಸರು ತಿಳಿಸಿದ್ದರು.
ಅದರಂತೆಯೇ ಮಾರ್ಚ್ 29 ರಂದು ಮಧ್ಯಾಹ್ನ 3 ಗಂಟೆಗೆ ಭಗತ್‌ಸಿಂಗ್ ಕ್ರೀಡಾಂಗಣದಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಶ್ರೀರಾಮ, ಶಿವ, ಆಂಜನೇಯ, ಇಮ್ಮಡಿ ಪುಲಿಕೇಶಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ವಿವಿಧ ದೇವತೆಗಳ ಪ್ರತಿಮೆಗಳು ಮೆರವಣಿಗೆ ನಡೆಲಾಯಿತು. ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ಈ ಶೋಭಾಯಾತ್ರೆಯಲ್ಲಿ ಡಿಜೆ ಆದೇಶ ಉಲ್ಲಂಘಿಸಿ ಡಿಜೆ ಬಳಕೆ ಮಾಡಿರುವ ಆರೋಪ ಹಾಗೂ ಕಾರ್ಯಕ್ರಮದ ಅನುಮತಿ ರಾತ್ರಿ 10 ಗಂಟೆಗೆ ಮಾತ್ರ ನೀಡಿದ್ದರು, 11, 45ರ ವರೆಗೂ ನಡೆಸಿದ್ದಾರೆಂಬ ಕಾರಣ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
