ದೊಡ್ಡಬಳ್ಳಾಪುರ: ಇಂದು ಪ್ರಕಟವಾದ 2025-26ನೇ ಸಾಲಿನ ಎಸ್ಎಸ್ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ ಪಡೆದಿದೆ.

2025- 26ನೇ ಸಾಲಿನಲ್ಲಿ 211 ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಅತ್ಯುತ್ತಮ ಫಲಿತಾಂಶವನ್ನು ನಳಂದ ಪ್ರೌಢಶಾಲೆ ತಂದಿದ್ದಾರೆ.


ನಳಂದ ಪ್ರೌಢ ಶಾಲೆಯ ವಿದ್ಯಾರ್ಥಿ ಚಂದ್ರ ಆರ್ 625ಕ್ಕೆ 619 (ರಾಜ್ಯಕ್ಕೆ ಏಳನೇ ರ್‍ಯಾಂಕ್), ದೀಕ್ಷಾ ಆರ್ 625ಕ್ಕೆ 616 (ರಾಜ್ಯಕ್ಕೆ ಒಂಬತ್ತನೇ ರ್‍ಯಾಂಕ್) ಮತ್ತು ರಮ್ಯಾ ಕೆ 625ಕ್ಕೆ 615 (ರಾಜ್ಯಕ್ಕೆ ಹತ್ತನೇ ರ್‍ಯಾಂಕ್) ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಫಲಿತಾಂಶವನ್ನು ಪಡೆದಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಸುನೀತಾ ಪಿ ಅವರು ತಿಳಿಸಿದ್ದಾರೆ.
ಫಲಿತಾಂಶದ ಬಳಿಕ ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿರುವ ಅವರು, ವಿದ್ಯಾರ್ಥಿಗಳೆಲ್ಲರೂ ಅತ್ಯಂತ ಕಠಿಣ ಪರಿಶ್ರಮದಿಂದ ಅಧ್ಯಯನಶೀಲರಾಗಿದ್ದು, ಈ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಈ ವರ್ಷ ಉತ್ತಮ ಫಲಿತಾಂಶ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು, ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕರನ್ನು ಹಾಗೂ ಉತ್ತಮವಾಗಿ ಸಹಕರಿಸಿದ ಎಲ್ಲಾ ಪೋಷಕರನ್ನು ಶಾಲಾ ಕಾರ್ಯದರ್ಶಿ ಅನುರಾಧಾ ಕೆಆರ್ ರವರು ಅಭಿನಂದಿಸಿ ವಿದ್ಯಾರ್ಥಿಗಳೆಲ್ಲರಿಗೂ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ.
ಈ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಚಂದ್ರ ಆರ್, ಶಾಲೆಯಲ್ಲಿರುವ ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣ, ಶಿಸ್ತು, ಸಮಯ ಪಾಲನೆ ಮತ್ತು ಅಧ್ಯಯನಶೀಲತೆಯೇ ನಮ್ಮ ಸಾಧನೆಗೆ ಕಾರಣವೆಂದು ತಿಳಿಸಿ, ಶಿಕ್ಷಕರ 24X7 ಪರಿಶ್ರಮ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ ಎಂದರು.

ಅತ್ಯುತ್ತಮ ಫಲಿತಾಂಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಗುರು ವೃಂದದವರು ಶುಭವನ್ನು ಕೋರಿದ್ದಾರೆ.

