ದೊಡ್ಡಬಳ್ಳಾಪುರ: ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಅವಕಾಶ ಕೊಡದ ಕಾಂಗ್ರೆಸ್, ಮಹಿಳಾ ವಿರೋಧಿ ಎಂಬುದು ಸಾಬೀತು ಮಾಡಿದೆ ಎಂದು ಜೆಡಿಎಸ್ (JDS) ಹಿರಿಯ ಮುಖಂಡ ಹರೀಶ್ ಗೌಡ (Harish Gowda) ಆಕ್ರೋಶ ವ್ಯಕ್ತಪಡಿಸಿದರು.

ನಗರದ ದೊಡ್ಡಬಳ್ಳಾಪುರ ತಾಲೂಕು ಕಚೇರಿ ವೃತ್ತದಲ್ಲಿ ಮಹಿಳಾ ಮೀಸಲಾತಿಯ ಜಾರಿಯನ್ನು ವಿರೋಧಿಸಿರುವ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರು ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಲು ಈ ಮಸೂದೆಯು ಸಹಕಾರಿಯಾಗಿದೆ. ಅಲ್ಲದೆ ಮೀಸಲಾತಿ ಮೂಲಕ ಹಲವಾರು ಪ್ರತಿಭಾನ್ವಿತ ಹೆಣ್ಣು ಮಕ್ಕಳು ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಆದರೆ ಇಂತಹ ಉತ್ತಮ ಮಸೂದೆಯನ್ನು ಕಾಂಗ್ರೆಸ್ ಒಪ್ಪದೇ ಇರುವುದು ವಿಪರ್ಯಾಸ.
ಯಾವುದೇ ಮಸೂದೆ ಕೇಂದ್ರದಲ್ಲಿ ಜಾರಿಯಾಗಬೇಕಾದರೆ ಬಹುಮತದ ಅವಶ್ಯಕತೆ ಇರುತ್ತದೆ. ಆದರೆ ಈ ಬಾರಿ ಮಹಿಳಾ ಸಬಲೀಕರಣಕ್ಕೆ ಹಾಗೂ ಸಮಾನತೆಗೆ ಪ್ರತೀಕವಾದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರದ ಎನ್ ಡಿಎ ಸರಕಾರ ಮುಂದಾಗಿತ್ತು. ಆದರೆ ಈ ಮಸೂದೆ ಜಾರಿಯಾಗದಂತೆ ಬಹುಮತ ಸೂಚಿಸದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷದ ನಡೆ ದೇಶದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ರಾಷ್ಟ್ರೀಯ ವರಿಷ್ಠರಾದ ಎಚ್ ಡಿ ದೇವೇಗೌಡ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಅನುಭವದ ಧಾರೆ ಎರೆದಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಅತ್ಯುತ್ತಮ ಮಸೂದೆ ಇದಾಗಿದ್ದು, ಈ ಮಸೂದೆ ಕೂಡಲೇ ಜಾರಿಯಾಗಬೇಕು. ಈ ಮಸೂದೆ ಜಾರಿಯಾದರೆ ದೇಶದಲ್ಲಿ ಸಾಕಷ್ಟು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಜೆಡಿಎಸ್‌ನ ಮುಖಂಡರು, ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ ನೂತನ ಎಸಿ ಮಂಜುನಾಥ್ ಅಧಿಕಾರ ಸ್ವೀಕಾರ

ದೊಡ್ಡಬಳ್ಳಾಪುರ: ಉಪವಿಭಾಗಾಧಿಕಾರಿ ಎನ್. ದುರ್ಗಶ್ರೀ (AC. N. Durgashree) ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಮಂಜುನಾಥ್ ಟಿ.ಆರ್. (Manjunath T.R) ಅವರು ಅಧಿಕಾರ ಸ್ವೀಕರಿಸಿದರು.
ಎನ್. ದುರ್ಗಶ್ರೀ ಇವರ ಸ್ಥಾನಕ್ಕೆ ಮಂಜುನಾಥ್ ಟಿ.ಅರ್. ಅವರನ್ನು ನೇಮಿಸಿ, ರಾಜ್ಯಪಾಲರ ಆದೇಶದ ಅನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಹೆಚ್. ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಮುಂಚೆ ಮಂಜುನಾಥ್ ಟಿ.ಅರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಆದೇಶವನ್ನು ಮಾರ್ಪಡಿಸಿ ದೊಡ್ಡಬಳ್ಳಾಪುರ ಉಪವಿಭಾಧಿಕಾರಿಯಾಗಿ ನೇಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮಂಜುನಾಥ್ ಅವರು ದೊಡ್ಡಬಳ್ಳಾಪುರ ಉಪವಿಭಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿಕಟ ಪೂರ್ವ ಎಸಿ ದುರ್ಗಶ್ರೀ ಹಾಗೂ ಸಿಬ್ಬಂದಿಗಳು ಸ್ವಾಗತ ಕೋರಿದರು.
ಇನ್ನೂ ದೊಡ್ಡಬಳ್ಳಾಪುರದಿಂದ ವರ್ಗಾವಣೆಯಾದ ದುರ್ಗಶ್ರೀ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ.
ಸರ್ಕಾರಿ ಜಾಮೀನು ಖಾಸಗಿ ಕಂಪನಿ ಹೆಸರಿಗೆ ಮಾಡಿದ್ದರೆಂದು ಆಗಿನ ತಹಶಿಲ್ದಾರ್ ವಿಭಾವಿದ್ಯಾ ರಾಥೋಡ್ ಹಾಗೂ ಎಸಿ ದುರ್ಗಶ್ರೀ ವಿರುದ್ಧ ಗಂಭೀರ ಆರೋಪ ಕೇಳಿ ಬಂದು ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದನ್ನು ಸ್ಮರಿಸಬಹುದಾಗಿದೆ.
SSLC ಪರೀಕ್ಷೆ-1ರ ಫಲಿತಾಂಶ ನಾಳೆ (ಏ.23) ಪ್ರಕಟ

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ನಾಳೆ ಗುರುವಾರ (ಏಪ್ರಿಲ್ 23) ಪ್ರಕಟವಾಗಲಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನಾಳೆ (ಏಪ್ರಿಲ್ 23) ಮಧ್ಯಾಹ್ನ 12.00 ಗಂಟೆಗೆ ಸರಿಯಾಗಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಸಂಬಂಧಪಟ್ಟ ಶಾಲೆಗಳಿಗೂ ಸಹ ಇದೇ ಸಮಯದಲ್ಲಿ ಫಲಿತಾಂಶದ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು ಎಂದಿದೆ.
ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಯ ನಂತರ https://www.digilocker.gov.in ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
