
ಕೆ.ಎಂ. ಸಂತೋಷ್, ಆರೂಢಿ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪ ಏರುತ್ತಲೇ ಇದೆ. ರಸ್ತೆಗಿಳಿದರೆ ಬೆಂಕಿಯ ಉಂಡೆ ಮೈಗೆ ತಗುಲಿದ ಅನುಭವವಾಗುತ್ತಿದೆ. ಈ ಹೆಚ್ಚುತ್ತಿರುವ ತಾಪಮಾನದ ಜೊತೆಗೆ ಆರೋಗ್ಯದ ಸಮಸ್ಯೆಗಳು ಕೂಡ ಅಷ್ಟೇ ವೇಗವಾಗಿ ಹೆಚ್ಚುತ್ತಿವೆ. ಮುಖ್ಯವಾಗಿ ‘ಹೀಟ್ ಸ್ಟ್ರೋಕ್’ (Heat Stroke) ಅಥವಾ ಶಾಖದ ಹೊಡೆತದ ಕಾಡುವ ಆತಂಕ ಎದುರಾಗಿದೆ.

ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂದು (ಏ.22) ಬೆಳಗ್ಗೆ 9 ಗಂಟೆ ವರದಿ ಅನ್ವಯ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಸಂಜೆಯ ವೇಳೆಗೆ 39 ಡಿಗ್ರಿ ಸೆಲ್ಸಿಯಸ್ಗೆ ಏರುವ ಆತಂಕವಿದೆ. ವೈದ್ಯರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಆರೋಗ್ಯದ ಬಗ್ಗೆ ಕಿಂಚಿತ್ತೂ ನಿರ್ಲಕ್ಷ್ಯ ಬೇಡ ಎಂದು ತಿಳಿಸಿದ್ದಾರೆ.

ಈ ಕುರಿತು ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ ಸಜ್ಜಾಗಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಆಡಳಿತಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಈ ವರೆಗೆ ಯಾವುದೇ ಹೀಟ್ ಸ್ಟ್ರೋಕ್ ಪ್ರಕರಣ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವರದಿಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ವಾರ್ಡ್‌ನಲ್ಲಿ ಎರಡು ಬೆಡ್ ಮೀಸಲಿಡಲಾಗಿದೆ. ಅಲ್ಲದೆ ಔಷಧಿ, ಉಪಕರಣ, ಸಿಬ್ಬಂದಿಗಳು ನೇಮಕ ಮಾಡಲಾಗಿದೆ ಎಂದಿದ್ದಾರೆ.
ಏನಿದು ಹೀಟ್ ಸ್ಟ್ರೋಕ್?
ಅತಿಯಾದ ಶಾಖಕ್ಕೆ ದೇಹವು ಒಡ್ಡಿಕೊಂಡಾಗ, ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಹೋದಾಗ ‘ಹೀಟ್ ಸ್ಟ್ರೋಕ್’ ಸಂಭವಿಸುತ್ತದೆ. ಇದು ಜೀವಕ್ಕೆ ಅಪಾಯಕಾರಿಯಾಗಬಲ್ಲ ಸ್ಥಿತಿಯಾಗಿದ್ದು, ತಕ್ಷಣದ ಚಿಕಿತ್ಸೆ ಅತ್ಯಗತ್ಯ.
ಮಕ್ಕಳ ಬಗ್ಗೆ ವಿಶೇಷ ಕಾಳಜಿ ಅಗತ್ಯ
ಬೇಸಗೆ ರಜೆಯಲ್ಲಿ ಮಗು ಎಂದಿನಂತೆ ಆಟವಾಡದೆ ಮಂಕಾಗಿದ್ದರೆ, ಅತಿಯಾದ ಸುಸ್ತು ಕಂಡುಬಂದು ಪದೇ ಪದೇ ಮಲಗಿಕೊಳ್ಳುತ್ತಿದ್ದರೆ, ಆಟವಾಡಲು ಆಸಕ್ತಿ ತೋರದೇ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ. ಇದು ಹೀಟ್ ಸ್ಟೋಕ್‌ನ ಆರಂಭಿಕ ಲಕ್ಷಣವಾಗಿರಬಹುದು.
ಹೀಟ್ ಸ್ಟೋಕ್‌ನ ಪ್ರಮುಖ ಲಕ್ಷಣಗಳು
ಅಧಿಕ ದೇಹದ ಉಷ್ಣತೆ: ದೇಹದ ತಾಪಮಾನ ಅತಿಯಾಗಿ ಏರುವುದು ಮತ್ತು ತೀವ್ರ ಜ್ವರ ಕಾಣಿಸಿಕೊಳ್ಳುವುದು.
ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ: ಗೊಂದಲಕ್ಕೊಳಗಾಗುವುದು, ಮಾತಿನಲ್ಲಿ ತೊದಲುವುದು, ಅತಿಯಾದ ಕಿರಿಕಿರಿ ಅಥವಾ ಪ್ರಜ್ಞೆ ತಪ್ಪುವುದು.
ಬೆವರಿನ ಕೊರತೆ: ವಿಪರೀತ ಶಾಖವಿದ್ದರೂ ದೇಹ ಬೆವರುವುದಿಲ್ಲ. ಚರ್ಮವು ತುಂಬಾ ಬಿಸಿ ಮತ್ತು ಒಣಗಿದಂತೆ ಭಾಸವಾಗುತ್ತದೆ.
ವಾಕರಿಕೆ ಮತ್ತು ವಾಂತಿ: ಹೊಟ್ಟೆ ಕೆಟ್ಟ ಅನುಭವವಾಗುವುದು ಮತ್ತು ಸತತವಾಗಿ ವಾಂತಿ ಬರುವುದು.
ವೇಗದ ಉಸಿರಾಟ: ಹೃದಯ ಬಡಿತ ಜೋರಾಗುವುದು ಮತ್ತು ಉಸಿರಾಟದಲ್ಲಿ ವೇಗ ಕಂಡುಬರುವುದು (ದೇಹವನ್ನು ತಂಪಾಗಿಸಲು ಹೃದಯವು ಹೆಚ್ಚು ಶ್ರಮ ಪಡುತ್ತದೆ).
ತಲೆತಿರುಗುವಿಕೆ: ವಿಪರೀತ ತಲೆನೋವು ಅಥವಾ ತಲೆ ಸುತ್ತು ಬರುವುದು.
ಮುನ್ನೆಚ್ಚರಿಕೆ ಕ್ರಮಗಳು
ಅತಿಯಾದ ನೀರು ಮತ್ತು ದ್ರವ ಪದಾಯಗಳನ್ನು (ಎಳನೀರು, ಮಜ್ಜಿಗೆ) ಸೇವಿಸಿ.
ಮಧ್ಯಾಹ್ನದ ವೇಳೆ ಅನಗತ್ಯವಾಗಿ ಬಿಸಿಲಿಗೆ ಹೋಗಬೇಡಿ.
ಸಡಿಲವಾದ ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ.
ತಲೆತಿರುಗುವಿಕೆ ಅಥವಾ ಪ್ರಜ್ಞೆ ತಪ್ಪುವ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಬಿಸಿಲು ಕೇವಲ ಬೆವರಿಸುವುದಿಲ್ಲ, ನಿಮ್ಮ ಆರೋಗ್ಯವನ್ನೂ ಹದಗೆಡಿಸಬಹುದು. ಮುನ್ನೆಚ್ಚರಿಕೆಯೇ ಮದ್ದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
