ದೊಡ್ಡಬಳ್ಳಾಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿಯನ್ನು (Shankaracharya Jayanti) ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಶಂಕರಾಚಾರ್ಯಿರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ತಹಸೀಲ್ದಾರ್ ಮಲ್ಲಪ್ಪ.ಕೆ.ಯರಗೋಳ ಮಾತನಾಡಿ, ವಿಶಿಷ್ಟಾಧ್ಯೈತ ಸಿದ್ದಾಂತವನ್ನು ಪ್ರತಿಪಾದಿಸಿದ ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾಗಿದ್ದಾರೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಶಂಕರಾಚಾರ್ಯರು ಪ್ರತಿಪಾದಿಸಿದ್ದಾರೆ.

ತಮ್ಮ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ ಅದ್ವೈತ ತತ್ವವನ್ನು ಪ್ರತಿಪಾದಿಸಿದರು. ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ ಪರಮಾತ್ಮನು . ಪರಮಾತ್ಮನೇ ಆತ್ಮನು ಎಂದು ಅದ್ವೈತ ಸಿಧ್ಧಾಂತದ ಮೂಲ ಸಾರವನ್ನು ಸಾರಿದರು. ಅವರೊಬ್ಬ ಮಹಾನ್ ದಾರ್ಶನಿಕ ಹಾಗೂ ತತ್ವಜ್ಞಾನಿಯಾಗಿದ್ದು, ಅವರ ಬೋಧನೆ ಹಾಗೂ ಚಿಂತನೆಗಳನ್ನು ಇಂದಿನ ಪೀಳಿಗೆ ಅರಿಯಬೇಕಿದೆ ಎಂದರು.
ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಕುಮಾರ್ ಮಾತನಾಡಿ, ಆದಿ ಶಂಕರರು ಎಂದು ಕರೆಯುವ ಆದಿ ಶಂಕರಾಚಾರ್ಯಾರು ಹಲವಾರು ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಕೇವಲ 32 ವರ್ಷಗಳ ಕಾಲ ಜೀವಿಸಿದ್ದ ಶಂಕರಾಚಾರ್ಯರು, ಆದಿ ಶಂಕರಾಚಾರ್ಯರೆನಿಸಿಕೊಂಡು ಹಿಂದು ಧರ್ಮದ ಸತ್ವನ್ನು ಪ್ರತಿಪಾದಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಯತಿಗಳಾಗಿದ್ದರು.
ಶಂಕರಾಚಾರ್ಯರು ದೇಶದ 4 ಮೂಲೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣ ಭಾರತದ ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ. ಕನಕದಾಸ, ಬಸವಣ್ಣ, ಶಂಕರಾಚಾರ್ಯ ಮೊದಲಾದ ಮಹಾಮಹಿಮರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೇ ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಡಿ.ಕೆ.ನರಸಿಂಹಮೂರ್ತಿ, ಆರ್.ದ್ವಾರಕಾನಾಥ್, ಬಿ.ಎಲ್.ರಾಜಮ್ಮ, ಜಿ.ಶ್ರೀನಿವಾಸ ರಾಘವನ್, ವಿ.ಕೆ.ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಕ್ರಮದಲ್ಲಿ ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಶ್ರೀ ಶಾರದಾ ಶಂಕರ ಸೇವಾ ಸಮಿತಿ ಟ್ರಸ್ಟ್ನ ಕಾರ್ಯ್ದರ್ಶಿ ರಾಘವೇಂದ್ರ ರಾವ್ ಸೇರಿದಂತೆ, ವಿವಿಧ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಹಾಗೂ ವಿಪ್ರ ಸಮುದಾಯದ ಮುಖಂಡರು ಭಾಗವಹಿಸಿದ್ದರು.
