ನವದೆಹಲಿ: ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿಗೂ ಎಂದಿಗೂ ಎಂದೆಂದಿಗೂ ನಮಗೆಲ್ಲರಿಗೂ ಅನುಕರಣೆಯ ಮತ್ತು ಪ್ರೇರಣದಾಯಕವೇ ಆಗಿವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಹೇಳಿದರು.

ಬಸವ ಜಯಂತಿ ಪ್ರಯುಕ್ತ ಸಂಸತ್ ಭವನದ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರಿಗೆ ಕೇಂದ್ರ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಕಿರಣ್ ರಿಜಿಜು ಹಾಗೂ ಕೇಂದ್ರ ಸರ್ಕಾರದ ರೈಲ್ವೆ, ಜಲಶಕ್ತಿ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರೊಂದಿಗೆ ಪುಷ್ಪನಮನ ಅರ್ಪಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.

12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಜನರ ಆಡಳಿತದ ಬಗ್ಗೆ ಬಸವಣ್ಣನವರು ಆಲೋಚನೆ ಮಾಡಿದರು. ಆ ಸಂದರ್ಭದಲ್ಲಿಯೇ ಪುರುಷ, ಸ್ತ್ರೀ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಸ್ಥಾನಮಾನಗಳನ್ನು ದೊರಕಿಸಿಕೊಡುವಲ್ಲಿ ಅವರು ಶ್ರಮಿಸಿದರು. ಅಂತಹ ಮಹಾನ್ ಚೇತನ ಬಿಟ್ಟು ಹೋದ ಸಂದೇಶಗಳು ಮತ್ತು ಆದರ್ಶಗಳು ನಮಗೆ ದೊಡ್ಡ ಆಸ್ತಿಯಾಗಿವೆ ಎಂದು ಸಚಿವರು ಹೇಳಿದರು.
12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಬೀಜಾಂಕುರ ಹಾಕಿದ್ದ ಬಸವಣ್ಣನವರು, ಸರ್ವರ ಸಾಮರಸ್ಯವನ್ನು ಒತ್ತಿ ಹೇಳಿದ್ದರು. ಜೊತೆಗೆ ಎಲ್ಲ ಸಮಾಜಗಳಿಗೆ ಸಮಾನ ಪ್ರಾತಿನಿಧ್ಯ ನೀಡಿ ಅನುಭವ ಮಟ್ಟದಲ್ಲಿ ಕೂರಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದರು.
ರಾಷ್ಟ್ರದ ಸಂಸತ್ ಭವನದ ಆವರಣದಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಅರ್ಪಿಸುವ ಅವಕಾಶ ಸಿಕ್ಕಿದ್ದು ನನ್ನ ಸುಕೃತ. ಈ ಕಾರ್ಯಕ್ರಮದಲ್ಲಿ ಸಚಿವರಾದ ಕಿರಣ್ ರಿಜಿಜು ಹಾಗೂ ಸೋಮಣ್ಣ ಅವರೊಂದಿಗೆ ಭಾಗವಹಿಸಿದ್ದು ಬಹಳ ಸಂತೋಷ ಉಂಟು ಮಾಡಿದೆ. ಅಲ್ಲದೆ ಅನೇಕ ಪರಮಪೂಜ್ಯರು ಹಾಗೂ ವಿವಿಧ ಕಡೆಗಳಿಂದ ಬಂದಿದ್ದ ಬಸವ ಅನುಯಾಯಿಗಳನ್ನು ಭೇಟಿ ಮಾಡಿದ್ದು ನನಗೆ ಸಂತಸ ತಂದಿದೆ ಎಂದು ಕೇಂದ್ರ ಸಚಿವರು ಹೇಳಿದರು.
