ದೊಡ್ಡಬಳ್ಳಾಪುರ: ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಬಸವಣ್ಣ (Basavanna). ಸಕಲ ಜೀವಾತ್ಮರಿಗೆ ಲೇಸು ಬಯಸುವುದು ಅವರ ಜೀವನದ ಮುಖ್ಯ ತತ್ವವಾಗಿತ್ತು ಎಂದು ಕನ್ನಡ ಜಾಗೃತ ಪರಿಷತ್ತು ಟ್ರಸ್ಟಿ ಎಸ್.ಮಹಾಬಲೇಶ್ವರ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾನತೆ ಮತ್ತು ಮಾನವೀಯತೆಯನ್ನು ಬಸವಣ್ಣನವರು ಪ್ರತಿಪಾದಿಸುತ್ತಾ, ಜಾತಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನರು ಎಂಬ ತತ್ವವನ ಪ್ರತಿಪಾದಿಸಿದರು. ನಡೆ-ನುಡಿ ಒಂದೇ ಆಗಿರಬೇಕೆಂದು ಪ್ರತಿಪಾದಿಸಿದರು.

ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮಧ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು.

ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಮೂಲಭೂತ ಸೌಕರ್ಯಗಳು ಎಲ್ಲಾ ಜನಸಾಮಾನ್ಯರಿಗೆ ಸಮಾನವಾಗಿ ಸಿಗಬೇಕೆಂಬುದಾಗಿತ್ತು. ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ಧ್ವನಿಯಾಗಬೇಕು. ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ ಮತ್ತು ಮಾನವತಾವಾದದ ದಾರಿದೀಪಗಳಾಗಿವೆ ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ ಮಾತನಾಡಿ, ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ವಚನಕಾರ ಬಸವಣ್ಣನವರು ಜನಪರ ಕಾಳಜಿಯ ಸಾಕಾರ ಮೂರ್ತಿಯಾಗಿದ್ದರು. ಅವರ ವಿಚಾರಗಳು, ಕಾಯಕ ಮತ್ತು ದಾಸೋಹ ತತ್ವಗಳು ಸಮಾಜದ ಕೆಳವರ್ಗದ ಜನರ ಏಳಿಗೆಗೆ, ಸಮಾನತೆಗೆ ದಾರಿ ದೀಪವಾಗಿವೆ ಎಂದರು.
ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ಮಾತನಾಡಿ, ಬಸವಣ್ಣ ಮತ್ತು ವಚನಕಾರರು ಸರಳ, ಜನಸಾಮಾನ್ಯರ ಭಾಷೆ ವಚನಗಳನ್ನು ರಚಿಸಿದವರು. ವಚನ ಸಾಹಿತ್ಯ ವಿಶ್ವ ಸಾಹಿತ್ಯ ಕನ್ನಡದ ಕೊಡುಗೆಯಾಗಿದೆ. ವಚನಕಾರರ ಸಾಹಿತ್ಯ ಮತ್ತು ಅವರ ಬದುಕು ಎಂದಿಗೂ ಆದರ್ಶವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡ ಜಾಗೃತ ಪರಿಷತ್ತು ಕೆ.ವೆಂಕಟೇಶ್
ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಣ್ಣ, ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್, ವಿವಿಧ ಕನ್ನಡಪರ ಸಂಘಟನೆಗಳ. ಪದಾಧಿಕಾರಿಗಳಾದ ವೆಂಕಟರಾಜು, ಮಂಜುನಾಥ್, ಜಿ.ಸುರೇಶ್, ಅಣ್ಣಯ್ಯ, ಚೌಡರಾಜ್, ಪರಮೇಶ್, ಸಫೀರ್, ಶ್ರೀನಿವಾಸ್, ಸೂರ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ; ಬಸವ ಜಯಂತಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಸವ ಜಯಂತಿ (Basava Jayanti celebration) ಕಾರ್ಯುಕ್ರಮವನ್ನು ಆಚರಿಸಲಾಯಿತು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ತಹಸೀಲ್ದಾರ್ ಮಲ್ಲಪ್ಪ.ಕೆ.ಯರಗೋಳ ಮಾತನಾಡಿ, 12 ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ತಮ್ಮ ವಚನಗಳ ಮೂಲಕ ಬಸವಣ್ಣನವರು. ಸಮಾಜದಲ್ಲಿ ಸುಧಾರಣೆಗಳನ್ನು ತಂದರು.
ಮಹಾ ಮಾನವತವಾದಿಯಾದ ಬಸವಣ್ಣನವರ ಚಿಂತನೆಗಳು ಉತ್ತಮ ಸಮಾಜಕ್ಕೆ ಅಡಿಪಾಯವಾಗಿವೆ. ಬಸವಣ್ಣನವರ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಮೊದಲಾದ ಹಿತನುಡಿಗಳು ಸದಾ ಕಾಲಕ್ಕೂ ಪ್ರಸ್ತುತವಾಗಿವೆ. ಬಸವಣ್ಣನವರ ತತ್ವಾದರ್ಶಗಳನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಇಂದು ಯಾವುದೇ ಸಂಘರ್ಷಗಳು, ಸಮಾಜ ಘಾತಕ ಕೃತ್ಯಗಳು ಸಂಭವಿಸುವುದಿಲ್ಲ. ಅವರ ತತ್ವ, ಆದರ್ಶಗಳು, ಚಿಂತನೆಗಳು ನಮಗೆಲ್ಲಾ ಮಾದರಿಯಾಗಬೇಕಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಾದ ಸೋಮರುದ್ರ ಶರ್ಮ, ಬಿ.ವಿ.ಬಸವರಾಜು, ಶಿವಾನಂದಪ್ಪ, ಆರ್.ಎಸ್.ಮಂಜುನಾಥ್, ಕೆ.ಎಚ್.ಪಾರ್ವತಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಸಂಘದ ತಾಲೂಕು ಅಧ್ಯಕ್ಷ ಎಸ್.ಜಿ.ಸೋಮರುದ್ರಶರ್ಮ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸುಜಯ್ ಕುಮಾರ್.ಎಂ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ, ಇನ್ಸ್ಪೆಕ್ಟರ್ ಅಮರೇಶ್ ಗೌಡ, ನಗರಸಭೆ ಎಇಇ ಈರಣ್ಣ, ಸೇರಿದಂತೆ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳು ಕಾರ್ಯ್ಕರ್ತರು, ತಾಲೂಕು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.
ತೂಬಗೆರೆಯಲ್ಲಿ ಬಸವ ಜಯಂತಿ ಆಚರಣೆ

ತೂಬಗೆರೆ: ಜಗಜ್ಯೋತಿ ಬಸವಣ್ಣ ಜಾತ್ಯತೀತ ನಾಯಕ. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡುವುದರ ಮೂಲಕ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡಿದ ಮಹಾನಾಯಕ ಬಸವಣ್ಣ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ತೂಬಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಸವಣ್ಣನವರ ತತ್ವ-ಆದರ್ಶಗಳನ್ನು ಪ್ರತಿಯೊಂದು ಸಮಾಜ ಪಾಲನೆ ಮಾಡುತ್ತಿರುವುದರಿಂದಲೇ ನಮ್ಮ ದೇಶ ಜಾತ್ಯತೀತ ಪಥದಲ್ಲಿ ಹೆಮ್ಮರವಾಗಿ ಬೆಳೆದಿದೆ,” ಎಂದರು.
ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, “ಶಿವನ ವಾಹನ ನಂದಿ ಹುಟ್ಟಿದ ದಿನವೇ ಬಸವ ಜಯಂತಿ, ಆದ್ದರಿಂದ ಈ ದಿನ ಹಸು-ಎತ್ತುಗಳನ್ನು ಪೂಜಿಸಿ ವಿಶೇಷ ಭಕ್ಷಗಳನ್ನು ನೀಡುವುದರ ಮೂಲಕ ಆಚರಿಸಬೇಕು ಎಂದು ಬಸವ ತತ್ವ ವಿರೋಧಿಗಳು ಜನಸಾಮಾನ್ಯರಲ್ಲಿ ಮೌಢ್ಯ ಬಿತ್ತಿದ್ದಾರೆ. ಬಸವಣ್ಣನವರ ವಿಚಾರಧಾರೆಗಳು ತಲುಪಬಾರದು ಎಂಬ ವ್ಯವಸ್ಥಿತ ಹುನ್ನಾರ ಈ ಮೌಢ್ಯದ ಹಿಂದಿದೆ.
ನಿಜವಾದ ಬಸವ ಜಯಂತಿ ಎಂದರೆ ತಮ್ಮ ಮನೆಯ ಹಸುಗಳು, ಎತ್ತುಗಳನ್ನು ಪೂಜಿಸುವುದರ ಜೊತೆಗೆ, ಮನುಷ್ಯ ಮನುಷ್ಯರ ನಡುವೆ ವರ್ಣ, ಜಾತಿ, ಲಿಂಗ ಭೇದ ಬೇರೂರಿದ್ದ ಕಾಲದಲ್ಲಿ ಸಮಾನತೆ, ಸಹೋದರತೆ ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವದ ಮೂಲಕ ಅನುಷ್ಠಾನಗೊಳಿಸಲು ಮುಂದಾದ ಮಹಾ ಮಾನವತಾವಾದಿ ಬಸವಣ್ಣ ಮತ್ತು ಅವರ ವಿಚಾರಧಾರೆಗಳನ್ನು ನೆನೆಯುವ ದಿನವಾಗಬೇಕು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮೌಢ್ಯ ತೊಲಗಿಸಿ ವೈಚಾರಿಕತೆ ಬೆಳೆಸಿಕೊಂಡು ಇತರರಲ್ಲಿ ಅದನ್ನು ಮೂಡಿಸುವುದೇ ಬಸವಣ್ಣನವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ,” ಎಂದು ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ವಿಶೇಷ ಮಂಟಪದಲ್ಲಿ ಬಸವಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.
ವಾದ್ಯಮೇಳದೊಂದಿಗೆ ಆರತಿ ಹಿಡಿದ ಮಹಿಳೆಯರು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ಸ್ವಾಮಿಗೆ ಆರತಿ ಸಲ್ಲಿಸಿದರು. ನೂರಾರು ಭಕ್ತರು ಬಸವೇಶ್ವರ ದೇವಾಲಯದಲ್ಲಿ ಬಸವಮೂರ್ತಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಭಕ್ತರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.
ವಿಶೇಷ ಪೂಜಾ ಕಾರ್ಯಕ್ರಮಗಳ ಬಳಿಕ ಸಂಜೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು. ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ತಾಲೂಕು ಸೊಸೈಟಿ ನಿರ್ದೇಶಕ ಪುರುಷೋತ್ತಮ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಎಚ್.ಎ., ಜೆಡಿಎಸ್ ಹೋಬಳಿ ಅಧ್ಯಕ್ಷ ಜಗನ್ನಾಥ್, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಬಚ್ಚಹಳ್ಳಿ ನಾಗರಾಜು, ಮುದ್ದಣ್ಣ, ನಾಗೇನಹಳ್ಳಿ ನಾಗರಾಜು, ಹಳ್ಳಿ ರೈತ ಅಂಬರೀಶ್, ಸ್ಥಳೀಯ ಮುಖಂಡರಾದ ವೆಂಕಟೇಶ್ ಟಿ.ವಿ., ಮುನಿಕೃಷ್ಣಪ್ಪ, ಕನಕದಾಸ, ಸುಬ್ರಹ್ಮಣ್ಯ, ಗಂಗರಾಜು, ಶ್ರೀಧರ, ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ್ ಗೌಡರ್, ಎಸ್ ಎಲ್ ಆರ್ ಎಸ್ ಶಾಲೆ ಮುಖ್ಯ ಶಿಕ್ಷಕ ನಾಗರಾಜು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹಾನಂದ ಆರಾಧ್ಯ, ಸದಾನಂದಯ್ಯ, ಚಂದ್ರು, ಉದಯ ಆರಾಧ್ಯ ಉಪಸ್ಥಿತರಿದ್ದರು.
