
ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆ ವೃತ್ತದ ಮೂಲಕ ಹಾದುಹೋಗುವ ಬೆಂಗಳೂರು ಹಿಂದೂಪುರ ರಾಜ್ಯ ಹೆದ್ದಾರಿಯ ಕಂಟನಕುಂಟೆ ವೃತ್ತದಲ್ಲಿ ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ರಸ್ತೆ ಉಬ್ಬುಗಳನ್ನು ಹಾಕುವುದು ಸೇರಿದಂತೆ ಇಲ್ಲಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಕಂಟನಕುಂಟೆ ಹಾಗೂ ಸುತ್ತಲಿನ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಕಂಟನಕುಂಟೆ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರಸ್ತೆ ತಡೆಯಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಕೆಲ ಕಾಲ ಸಾಲುಗಟ್ಟಿ ನಿಂತಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ಬೆಂಗಳೂರು ಹಿಂದೂಪುರ ರಾಜ್ಯ ಹೆದ್ದಾರಿಯ ಕಂಟನಕುಂಟೆ ವೃತ್ತದಲ್ಲಿಯೇ ರಸ್ತೆ ವಿಭಜಕ ಕೊನೆಗೊಂಡು, ಗೌರಿಬಿದನೂರು ರಸ್ತೆ ಕಡೆ ರಸ್ತೆ ವಿಭಜಕ ನಿರ್ಮಿಸಿಲ್ಲದಿರುವುದರಿಂದ, ರಸ್ತೆ ಕಿರಿದಾಗಿದೆ. ಹದ್ದಾರಿಯಾದ್ದರಿಂದ ವಾಹನಗಳು ಅತಿ ವೇಗವಾಗಿ ಚಲಿಸುತ್ತಿದ್ದು, ರಸ್ತೆ ಅಪಘಾತಗಳಾಗಿ ಸಾವು ನೋವುಗಳಾಗುತ್ತಿವೆ. ರಸ್ತೆಯ ಆಸುಪಾಸಿನಲ್ಲಿಯೇ ಶಾಲೆಗಳು, ಹಾಲಿನ ಡೈರಿ, ಬ್ಯಾಂಕ್, ವಾಣಿಜ್ಯ ಮಳಿಗೆಗಳು ಇರುವುದರಿಂದ ಜನಸಂದಣಿ ಹೆಚ್ಚಾಗಿದೆ. ಘಾಟಿ ರಸ್ತೆಗೆ ಅವೈಜ್ಞಾನಿಕ ತಿರುವು ನಿರ್ಮಿಸಿರುವುದರಿಂದ ಅಪಘಾತಗಳು ಹೆಚ್ಚಾಗಿವೆ ಎಂದು ದೂರಿದರು.
ಕಳೆದ 9 ತಿಂಗಳಿನಿಂದ ಇಲ್ಲಿ ಬಹಳಷ್ಟು ಅಪಘಾತಗಳಾಗಿದ್ದು, ಒಂದು ತಿಂಗಳಲ್ಲಿ ಮೂರಕ್ಕೂ ಹೆಚ್ಚು ಸಾವು ಸಂಭವಿಸಿದೆ. ಪ್ರಸಿದ್ದ ಘಾಟಿ ಕ್ಷೇತ್ರಕ್ಕೆ ಇಲ್ಲಿಂದಲೇ ರಸ್ತೆ ತಿರುವುಪಡೆಯಬೇಕಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯಿತಿ ವತಿಯಿಂದ ಸಹ ಈ ಬಗ್ಗೆ ಮನವಿ ಮಾಡಲಾಗಿದ್ದು, ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಒತ್ತಾಯಗಳು: ಈ ಕೂಡಲೇ ಎರಡು ಕಡೆ ರಸ್ತೆ ಉಬ್ಬುಗಳನ್ನು ಹಾಕಿಸಬೇಕು. ರಸ್ತೆ ನಡುವೆ ಬ್ಯಾರಿಕೇಟ್ ಅಳವಡಿಸಲು ಅನುಮತಿ ನೀಡಬೇಕು. ಗ್ರಾಮದ ಹೊರಗಿನ 500ಮೀಟರ್ಗೂ ಅಕ ರಸ್ತೆ ವಿಭಜಕ ಮತ್ತು ಬೀದಿ ದೀಪ ಅಳವಡಿಸಬೇಕು. ರಾಜ್ಯ ಹೆದ್ದಾರಿ ರಸ್ತೆಯ ಪೂರಕ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು. ಘಾಟಿ ರಸ್ತೆ ತಿರುವಿಗೆ ಅಂಡರ್ ಪಾಸ್ ನಿರ್ಮಿಸುವುದು, ರಸ್ತೆಯ ಎರಡೂ ಬದಿ ಚರಂಡಿ ವ್ಯವಸ್ಥೆಯನ್ನು ಗ್ರಾಮದ ಹೊರಗಿನವರೆಗೂ ನಿರ್ಮಿಸ ಬೇಕೆಂದು ಒತ್ತಾಯಿಸಿ, ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಎಇಇ ಪುಟ್ಟಪ್ಪ, ಇಲ್ಲಿನ ರಸ್ತೆಯ ನ್ಯೂನತೆಗಳನ್ನು ಪರಿಶೀಲಿಸಲಾಗುವುದು. ಗ್ರಾಮಸ್ಥರ ಮನವಿಯನ್ನು ಮೇಲಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಡಿ.ಮಂಜುನಾಥ್ ಮಾತನಾಡಿ, ಇಲ್ಲಿ ನಡೆದಿರುವ ಅಪಘಾತಗಳು ಹಾಗೂ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸುವ ಕುರಿತಂತೆ ಪೋಲೀಸ್ ಇಲಾಖೆಯಿಂದ ಸಹ ಸಂಬಂಧಪಟ್ಟವರಿಗೆ ವರದಿ ನೀಡಲಾಗುವುದು ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

