
ದೊಡ್ಡಬಳ್ಳಾಪುರ: ತಾಲೂಕಿನ ಹುಲಿಕುಂಟೆ, ತೂಬುಕುಂಟೆ ಹಾಗೂ ದೊಡ್ಡಬೆಳವಂಗಲ ಗ್ರಾಮಗಳಲ್ಲಿ 12 ಶಾಲಾ ಕಟ್ಟಡ, ರೈತ ಸಂಪರ್ಕ ಕೇಂದ್ರ, ಡಾ.ಅಂಬೇಡ್ಕರ್ ಭವನ ಹಾಗೂ ಒಂದು ಅಂಗನವಾಡಿ ನೂತನ ಕಟ್ಟಡಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಜಿಪಂ ಅಧ್ಯಕ್ಷ ವಿ.ಪ್ರಸಾದ್ ಉದ್ಘಾಟಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಸಾಮಾಜಿಕ ಜವಬ್ದಾರಿ ಯೋಜನೆಯಡಿ ಖಾಸಗಿ ಸಂಸ್ಥೆಗಳು ಶ್ಲಾಘನೀಯ ಕಾರ್ಯವನ್ನು ಶಿಕ್ಷಣ ಇಲಾಖೆಗೆ ಸಲ್ಲಿಸುತ್ತಿವೆ. ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ಯಲ್ಲಿ ಶೈಕ್ಷಣಿಕ ಮೂಲಭೂತ ಸೌಲಭ್ಯಕ್ಕೆ ಸಾಮಾಜಿಕ ಜವಬ್ದಾರಿಯನ್ನು ಹೊರುವುದರಲ್ಲಿ ಸಂಸ್ಥೆಗಳು ಮೊದಲ ಸ್ಥಾನದಲ್ಲಿವೆ.
ಶಾಲಾ ಮಕ್ಕಳು ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ಕರೊನಾ ಕಾರಣ ಖಾಸಗಿ ಶಾಲೆಗಳಿಂದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಬಂದು ದಾಖಲಾತಿ ಹೆಚ್ಚಳವಾಗಿದೆ. ಕಾರಣ ಕರೊನಾ ಸಂಧರ್ಭದಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕ್ರಮ, ವಿದ್ಯಾಗಮ ಯೋಜನೆಯ ಯಶಸ್ವಿ ಅನುಷ್ಠಾನ ಕಾರಣವಾಗಿದೆ.
10ನೇ ತರಗತಿ ಫಲಿತಾಂಶದಲ್ಲಿ ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದ ಜಿಲ್ಲೆಗೆ,ಈ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ತರಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕಿದೆ. ಅನುದಾನಿತ ಪ್ರೌಡಶಾಲೆಗಳಿಗೆ ಮೂಲ ಭೂತ ಸೌಲಭ್ಯವಾದ ಶೌಚಾಲಯ ನಿರ್ಮಿಸಲು ನರೇಗಾ ಯೋಜನೆಯಡಿ 4ಲಕ್ಷ ಅನುಧಾನ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ ಎಂದರು.
ಇಂಡೋಮೆಮ್ ಸಂಸ್ಥೆಯ ವ್ಯವಸ್ಥಾಪಕ ಸುರೇಶ್ ಗೌಡ ಮಾತನಾಡಿ, ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಕೈಗಾರಿಕೆಗಳು ಸಾಮಾಜಿಕ ಸಹ ಭಾಗಿತ್ವದಲ್ಲಿ ಹೆಚ್ಚಾಗಬೇಕೆಂಬ ಕರೆಗೆ ಸ್ಪಂದಿಸಿ, ಇಂಡೋಮೆಮ್ ಮಾಲೀಕರಾದ ಕೃಷ್ಣ ಜೂಕಾಳ ಅವರು ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ವರ್ಷ 2ಕೋಟಿ ನೀಡುತ್ತಿದ್ದಾರೆ. ಅದರಂತೆ ಮಕ್ಕಳು ಶಿಕ್ಷಣ ಜೀವನ ರೂಪಿಸಿ ಕೊಳ್ಳಬೇಕಿದೆ. ಅಲ್ಲದೆ, ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕಿದೆ. ಮಕ್ಕಳ ಜೀವನ ರೂಪಿಸುವ ಹೊಣೆಗಾರಿಕೆ ನಿಮ್ಮದಾಗಿದೆ. ಮಕ್ಕಳನ್ನು ಕೇವಲ ಭತ್ತ ತುಂಬುವ ಕಣಜವನ್ನಾಗಿಸದೆ,ಹೊಸ ಹೊಸ ವಿಚಾರಗಳ ತಿಳಿಸಿ ಶೈಕ್ಷಣಿಕವಾಗಿ ಉತ್ತಮ ಜೀವನ ರೂಪಿಸಬೇಕಿದೆ ಎಂದರು. ಅಲ್ಲದೆ ಹುಲಿಕುಂಟೆ ಶಾಲೆಗೆ ಶಾಸಕ ಟಿ.ವೆಂಕಟರಮಣಯ್ಯರ ಮನವಿಯಂತೆ, ಮುಂದಿನ ಹಂತವಾಗಿ ಸಲಕರಣೆಗಳನ್ನು ನೀಡಲಾಗುವುದು ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಉತ್ತಮ ಸೌಲಭ್ಯಗಳನ್ನು ಸರ್ಕಾರಿ ಶಾಲೆಗೆ ನೀಡುತ್ತಿವೆ. ಆದರೆ ಇದರ ಪ್ರಯೋಜನ ಸಿಗುವುದು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದ ಉತ್ತೀರ್ಣರಾದಾಗ ಮಾತ್ರ ಸಾಧ್ಯ.
ತಾಲೂಕಿಗೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಬಹಳಷ್ಟು ಕಾರ್ಯವನ್ನು ಮಾಡಲಾಗಿದೆ. ನಾವುಗಳು ಓದುವ ಸಂಧರ್ಭದಲ್ಲಿ ಇದ್ದ ಕಷ್ಟಗಳು ಈಗಿನ ಮಕ್ಕಳಿಗೆ ಇಲ್ಲವಾಗಿದೆ, ಇದನ್ನರಿತು ಉತ್ತಮ ಶೈಕ್ಷಣಿಕ ಜೀವನ ರೂಪಿಸಿಕೊಳ್ಳವ ಜವಬ್ದಾರಿ ಹೊರಬೇಕೆಂದರು.
ಎಲ್&ಟಿ ಮುಖ್ಯಸ್ಥ ಶೈಲೇಶ್ ಎಂ.ಕೋಡ್ಕಣಿ ಮಾತನಾಡಿ, ಆಧುನಿಕ ಜಗದಲ್ಲಿ ಎಲ್ಲಾ ರಂಗದಲ್ಲಿಯೂ ಡಿಜಿಟಲೀಕರಣವಾಗಿದ್ದು, ಶಾಲಾ ಮಕ್ಕಳಿಗೆ ಒತ್ತಡಕ್ಕೆ ಒಳಗಾಗದೆ ಹೆಚ್ಚಿನ ಶಿಕ್ಷಣ ಸೌಲಭ್ಯ ಹಾಗೂ ಪೂರಕ ಮಾಹಿತಿ ಸಿಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶೈಕ್ಷಣಿಕ ಜೀವನ ರೂಪಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ಹುಲಿಕುಂಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಅನುದಾನದಡಿ ಹಾಗೂ ಇಂಡೋಮಿಮ್ ಸಂಸ್ಥೆಯವತಿಯಿಂದ ಐದು ನೂತನ ಕಟ್ಟಡ, ತೂಬುಕುಂಟೆಯಲ್ಲಿ ಎಲ್&ಟಿ ಸಂಸ್ಥೆ ನಿರ್ಮಿಸಿರುವ ಅಂಗನವಾಡಿ ಕಟ್ಟಡ, ದೊಡ್ಡಬೆಳವಂಗಲದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರಿ ವಿಶೇಷ ಪ್ಯಾಕೇಜ್ ನಡಿ ಮತ್ತು ಆರ್.ಐ.ಡಿ.ಎಫ್ ಹಾಗೂ ಎಲ್ & ಟಿ ಸಂಸ್ಥೆಯ ಸಿ.ಎಸ್.ಆರ್ ಅನುದಾನಡಿ ನಿರ್ಮಿಸಲಾದ 7 ಕೊಠಡಿಗಳು, ರೈತ ಮಿತ್ರ ಯೋಜನೆಯಡಿ 50 ಲಕ್ಷ ಅನುದಾನಾದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸುಮಾರು 50ಲಕ್ಷ ಅನುದಾನದಲ್ಲಿ ನಿರ್ಮಿಸಿದ್ದ ಡಾ.ಅಂಬೇಡ್ಕರ್ ಭವನವನ್ನು ಉದ್ಘಾಟನೆ ಮಾಡಲಾಯಿತು. ಇದೇ ವೇಳೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನಡಿ ಮೂರು ಕೊಠಡಿಗಳಿಗೆ ಶಂಕುಸ್ಥಾಪನೆ ನಡೆಸಲಾಯಿತು ಹಾಗೂ ಎಸ್.ಎಲ್.ಆರ್ ಕಂಪನಿ ವತಿಯಿಂದ ಹುಲಿಕುಂಟೆ ಪ್ರೌಡಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಪಂ ಅಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷೆ ಬಿ.ಎಂ.ಯಶೋಧಮ್ಮ ಶಿವಕುಮಾರ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ರಾಮಲಿಂಗಯ್ಯ, ಸದಸ್ಯರಾದ ಡಿ.ಸಿ.ಶಶಿಧರ್, ಶ್ರೀವತ್ಸ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಬಿಇಒ ಬೈಯಪ್ಪರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಎಸ್.ಅನಿತಾಲಕ್ಷ್ಮೀ, ಸಹಾಯಕ ಕೃಷಿ ನಿರ್ದೇಶಕಿ ಎನ್ ಸುಶೀಲಮ್ಮ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರೂಪ, ಕೃಷಿ ಅಧಿಕಾರಿ ಹರೀಶ್, ಕಸ್ತೂರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಹುಲಿಕುಂಟೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಆರ್.ಪ್ರಹ್ಲಾದ್, ಮುಖಂಡರಾದ ಆಂಜನಮೂರ್ತಿ, ಕುಮುದಾ, ಶ್ರೀನಿವಾಸ್, ಎಸ್.ಎಲ್.ಆರ್ ಕಂಪನಿಯ ಸಿಬ್ಬಂದಿಗಳು, ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು,
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

