
ಬೆಂಗಳೂರು: ನವೀಕರಣಕ್ಕೆ ಅಡ್ಡಿಯಾಗಿದ್ದ ಹೊಸ ನಿಯಮವಾದ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಕಡ್ಡಾಯ ನಿಯಮವನ್ನು ಶಿಕ್ಷಣ ಇಲಾಖೆ ಸಡಿಲಿಸಿದ್ದು ಖಾಸಗಿ ಅನುದಾನ ರಹಿತ / ಅನುದಾನಿತ ಶಾಲೆಗಳು ನಿಟ್ಟುಸಿರು ಬಿಟ್ಟಿವೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿನ ಖಾಸಗಿ ಅನುದಾನಿತ/ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ಅನುಮತಿ/ಮಂಜೂರಾತಿ ಪಡೆಯಲು ಹಾಗೂ ಹಳೆಯ ಪದವಿ ಪೂರ್ವ ಕಾಲೇಜು ಕಟ್ಟಡಗಳಲ್ಲಿ ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್ ಇಂಡಿಯಾ ನಿಯಮಾವಳಿಗಳ ಅನ್ವಯ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ (ಕ್ಲಿಯರೆನ್ಸ್ ಸರ್ಟಿಫಿಕೇಟ್) ನೀಡುವ ಕುರಿತು ಲೋಕೋಪಯೋಗಿ ಇಲಾಖೆ ಮತ್ತು ಅಗ್ನಿನಂದಕ ಇಲಾಖೆಗಳಿಂದ ನಿರ್ಧಿಷ್ಟ ಪ್ರಮಾಣ ಪತ್ರ ಪಡೆಯುವುದನ್ನು ಖಡ್ಡಾಯಗೊಳಿಸಿತ್ತು.
ಈ ಹೊಸ ನಿಯಮಾವಳಿಗಳಿಂದಾಗಿ ಖಾಸಗಿ/ಅನುದಾನಿತ ಶಾಲೆಗಳು ನವೀಕರಣ ಮಾಡಿಸಲು ಅಡ್ಡಿ ಎದುರಾಗಿತ್ತು. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಘೋಷಿಸಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿದ್ದು, ತರಗತಿಗಳು ಆರಂಭವಾಗದೆ ಖಾಸಗಿ ಶಿಕ್ಷಣ ಸಂಸ್ಥೆಗಳು ತತ್ತರಿಸಿ ಹೋಗಿವೆ. ಶುಲ್ಕ ಕಟ್ಟದ ಪೋಷಕರಿಂದ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸಂಬಳ ನೀಡಲಾಗದೆ ಪರಿತಪಿಸುತ್ತಿರುವ ಸಂಧರ್ಭದಲ್ಲಿ, ಶಿಕ್ಷಣ ಇಲಾಖೆಯ ಈ ಹೊಸನಿಯಮ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಎಲ್ಲಾ ಬೆಳವಣಿಗೆಯ ನಡುವೆ ಶಿಕ್ಷಣ ಇಲಾಖೆ ನಿಯಮವನ್ನು ಸಡಿಲಿಸಿದ್ದು, ಕೋವಿಡ್-19 ನಂತರ ಆರ್ಥಿಕ ಪರಿಸ್ಥಿತಿ ಗಮನದಲ್ಲಿರಿಸಿಕೊಂಡು ಈ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ 2017/18 ಸಾಲಿಗೆ ಮುಂಚೆಯಿಂದ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು- ಪದವಿ ಪೂರ್ವ ಕಾಲೇಜುಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಿದೆ.
ಶಿಕ್ಷಣ ಇಲಾಖೆಯ ಈ ನಿರ್ಧಾರವನ್ನು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಎ.ಸುಬ್ರಮಣ್ಯ, ಕಾರ್ಯದರ್ಶಿ ಎಸ್.ಆರ್.ರಮೇಶ್ ಸ್ವಾಗತಿಸಿದ್ದು, ಇದಕ್ಕೆ ಕಾರಣರಾದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹಾಗೂ ಕ್ಯಾಮ್ಸ್ ಕಾರ್ಯದರ್ಶಿ ಡಿ.ಶಶಿಕುಮಾರ್ ಅಭಿನಂದಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

