
ದೊಡ್ಡಬಳ್ಳಾಪುರ: ನಗರದ ಭಗತ್‍ಸಿಂಗ್ ಕ್ರೀಡಾಂಗಣ ಎದುರಿನ ಅಂಚೆ ಕಚೇರಿ ರಸ್ತೆಯಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಿದ್ದ ಸಾವಯವ ಸಂತೆಗೆ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಂತೆ ಉದ್ಘಾಟನೆ ಕಂಡ ಕೆಲವೇ ಕ್ಷಣಗಳಲ್ಲಿ ಉತ್ಪನ್ನಗಳು ಖಾಲಿಯಾಗುವ ಮೂಲಕ ಆಯೋಜಕರೇ ಆಶ್ಚರ್ಯಚಕಿತರಾಗುವಂತೆ ಮಾಡಿದ್ದರೆ, ಸಂತೆಗೆ ವಿಳಂಬವಾಗಿ ಬಂದ ಗ್ರಾಹಕರು ಉತ್ಪನ್ನಗಳು ದೊರಕದೆ ಬೇಸರದಿಂದ ಮನೆಗೆ ತೆರಳಿದರು.

ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಮತ್ತು ಪರಿಸರ, ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್, ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು, ಸಾವಯವ ಕೃಷಿ ಹೆಚ್ಚಾಗುವುದರಿಂದ ದುಬಾರಿ ಎನಿಸಿರುವ ಸಾವಯವ ಉತ್ಪನ್ನಗಳು ಎಲ್ಲರ ಕೈಗೆಟುಕುತ್ತವೆ ಎಂದು ಹೇಳಿದರು.
ವಾಣಿಜ್ಯೀಕರಣದಿಂದಾಗಿ ಇಂದು ನಮ್ಮ ಪಾರಂಪರಿಕ ಕೃಷಿ ಪದ್ದತಿಗಳು ಮರೆಯಾಗುತ್ತಿವೆ. ಈಗ ಮತ್ತೆ ಅವುಗಳನ್ನು ಅಳವಡಿಸಿಕೊಳ್ಳಬೇಕಾದ ಸಂದರ್ಭ ಮತ್ತೆ ಬಂದಿದೆ. ತಮ್ಮ ಬಾಲ್ಯದಲ್ಲಿ ಹಲವಾರು ರೀತಿಯ ಸೊಪ್ಪು ತರಕಾರಿಗಳನ್ನು ಸೇವಿಸುತ್ತಿದ್ದುದನ್ನು ಸ್ಮರಿಸಿದ ಅವರು, ರೈತರಿಂದ ಗ್ರಾಹಕರಿಗೆ ಕೃಷಿ ಉತ್ಪನ್ನಗಳು ತಲುಪಲು ಸಂತೆಗಳು ಮಹತ್ವದ ಪಾತ್ರ ವಹಿಸಲಿದ್ದು, ಸರ್ಕಾರದಿಂದ ಸಂತೆಗಳ ಆಯೋಜನೆಗೆ ಉತ್ತೇಜನ ನೀಡಲಾಗುವುದು ಎಂದರು.
ಕೃಷಿಗೆ ನೀರಾವರಿ ಪ್ರಮುಖವಾಗಿದ್ದು, ಅಂತರ್ಜಲ ಕೊರತೆ ಇರುವ ಜಿಲ್ಲೆಗಳಿಗೆ ಸರ್ಕಾರ ನೀರಾವರಿ ಯೋಜನೆಗಳನ್ನು ನೀಡುವುದು ಸಹ ಸರ್ಕಾರದ ಕರ್ತವ್ಯವಾಗಿದೆ ಎಂದರು.
ಸ್ವದೇಶಿ ಜಾಗರಣ ಮಂಚ್ ಕ್ಷೇತ್ರೀಯ ಸಂಘಟಕ ಜಗದೀಶ ಮಾತನಾಡಿ, ಕೃಷಿಯಿಂದ ನಷ್ಟ ಎನ್ನುವ ಮಾತು ಸುಳ್ಳು. ಸಾವಯವ ಕೃಷಿ ಅಳವಡಿಸಿಕೊಂಡ ರೈತ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಲ್ಲ. ರೈತರ ಆತ್ಮಹತ್ಯೆ ತಡೆಗೆ ಸಾವಯವ ಕೃಷಿಯೇ ಪರಿಹಾರ. ರಾಸಾಯನಿಕ ಕೃಷಿ ಪದ್ದತಿಗಳಿಂದ ಫಸಲು ಬಂತು ಅಸಲು ಹೋಯ್ತು ಎಂಬಾಂತಾಗಿದ್ದು, ದೇಹಕ್ಕೆ ವಿಷಕಾರಕ ವಸ್ತುಗಳು ಸೇರುತ್ತಿವೆ.
ದೇಶದಲ್ಲಿ ಕೃಷಿ ಭೂಮಿ ಹೆಚ್ಚಾಗಿದ್ದರೂ ಸಹ ಸಮರ್ಪಕವಾಗಿ ಬಳಕೆಯಾಗದಿರುವುದು ವಿಷಾದಕರ ಸಂಗತಿ. 300 ಕೋಟಿ ಜನರಿಗೆ ಆಹಾರ ನೀಡುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ವಿದೇಶೀ ಆಹಾರ ಪದ್ದತಿಗಳನ್ನು ಅಳವಡಿಸಿಕೊಂಡು ಮೈದಾ ಸಕ್ಕರೆ, ರೀಪೈನ್ಡ್ ಆಯಿಲ್‍ಗಳನ್ನು ಬಳಸುತ್ತಿರುವ ಪರಿಣಾಮ ಕ್ಯಾನ್ಸರ್‍ಗಳಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ದಿಸೆಯಲ್ಲಿ ಪ್ರಕೃತಿದತ್ತ ಆಹಾರ ಸೇವನೆ ಹಾಗೂ ನಮ್ಮ ಸಾವಯವ ಪದ್ದತಿಗಳನ್ನು ಉತ್ತೇಜಿಸುವ ಸಲುವಾಗಿ ಪ್ರತಿ ವಾರ ಸಾವಯವ ಸಂತೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ ಮಂಚ್ ಜಿಲ್ಲಾ ಸಂಯೋಜಕ ಆಂಜಿನಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ್ ಕುಮಾರ್, ಕೃಷಿ ಇಲಾಖೆಯ ಜೆಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ, ತಾಂತ್ರಿಕ ಅಧಿಕಾರಿ ರೂಪ, ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್, ಸ್ವದೇಶಿ ಜಾಗರಣ ಮಂಚ್‍ನ ಶ್ರೀನಿವಾಸ್, ಮುಖಂಡರಾದ ಮಲ್ಲಪ್ಪ, ವತ್ಸಲ, ರಾಮಕೃಷ್ಣ, ರಾಷ್ಟ್ರೋತ್ತಾನ ಗೋಶಾಲೆಯ ಸಂಚಾಲಕ ಜೀವನ್ ಕುಮಾರ್, ಪ್ರಕಾಶ್ ರೆಡ್ಡಿ, ಶಿವಾನಂದರೆಡ್ಡಿ ಮತ್ತಿತರಿದ್ದರು.
ಸಂತೆಯಲ್ಲಿ ಸಾವಯವ ಹಣ್ಣು, ತರಕಾರಿ, ಸೊಪ್ಪು,ಧಾನ್ಯಗಳು, ದೇಶಿ ಹಸುವಿನ ತುಪ್ಪ, ಜೇನುತುಪ್ಪ, ಬೆಲ್ಲ ಸೇರಿದಂತೆ ಇತರೆ ಹಣ್ಣು, ತರಕಾರಿ ಮಾರಾಟ ಭರ್ಜರಿಯಾಗಿ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

