
ಬೆಂ.ಗ್ರಾ.ಜಿಲ್ಲೆ: ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಹಾಗೂ ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಮಾರ್ಚ್ 15 ರಿಂದ (ಸೋಮವಾರ) ಜೂನ್ 15 ರವರೆಗೆ ಮೂರು ತಿಂಗಳ ಅವಧಿಗೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅಡಿಯಲ್ಲಿ ‘ದುಡಿಯೋಣ ಬಾ’ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಕೆಲಸ ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ‘ದುಡಿಯೋಣ ಬಾ’ ಅಭಿಯಾನ ಉದ್ದೇಶವಾಗಿದೆ.
ಅಭಿಯಾನದ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಹಂತಗಳನ್ನು ನಿಗದಿಪಡಿಸಲಾಗಿದ್ದು, ಮಾರ್ಚ್ 15 ರಿಂದ 22 ರವರೆಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಭಿಯಾನ ಕುರಿತು ಜನ ಜಾಗೃತಿ ನಡೆಯಲಿದೆ. ಉದ್ಯೋಗ ಚೀಟಿ ಹೊಂದಿರದ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲಾಗುವುದು. ಜನ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಂದ ಒಂದೇ ಬಾರಿಗೆ ಮೂರು ತಿಂಗಳ ಕೆಲಸದ ಬೇಡಿಕೆ ಪಡೆಯಲಾಗುವುದು. ಮಾರ್ಚ್ 23 ರಿಂದ 31ರವರೆಗೆ ಅರ್ಜಿ ಸಲ್ಲಿಸಿದ ಎಲ್ಲ ಕುಟುಂಬಗಳಿಗೆ ಉದ್ಯೋಗ ಚೀಟಿಯನ್ನು ಜಿಲ್ಲಾ ಪಂಚಾಯಿತಿ ವಿತರಿಸಲಿದೆ. ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತ ಮಂಜೂರಾತಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಕೆ, ಜಿಯೋ ಟ್ಯಾಗ್ ಇತ್ಯಾದಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಿದ್ದು, ಕೂಲಿಕಾರರ ಗುಂಪುಗಳನ್ನು ರಚಿಸಿ, ಈ ಅವಧಿಯಲ್ಲಿ ತರಬೇತಿ ನೀಡಲಿದೆ.
ಏಪ್ರಿಲ್ 1 ರಿಂದ ಜೂನ್15 ರವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಸಲ್ಲಿಸಿದ ವಿವರಗಳನ್ನು ದಾಖಲಿಸಿ ಎರಡು ದಿನಗಳೊಳಗೆ ಕೆಲಸ ಒದಗಿಸಲಾಗುವುದು. ಕೆಲಸಗಾರರಿಗೆ ನಿರಂತರವಾಗಿ ಕೆಲಸ ಒದಗಿಸಲಾಗುವುದು ಹಾಗೂ ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಅಭಿಯಾನದ ಸುಗಮ ನಿರ್ವಹಣೆ ಹಾಗೂ ಪ್ರಗತಿಗಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.
ಅಭಿಯಾನದ ಅವಧಿಯಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ, ಸೋಕ್ ಪಿಟ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಕೆರೆ ಅಭಿವೃದ್ದಿ ಕಾರ್ಯಕ್ರಮದಡಿ ಕಾಲುವೆಗಳ ಪುನಶ್ಚೇತನ, ಕೆರೆಗಳ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಲಾಗುವುದು. ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವುದು, ಕೊಳವೆಬಾವಿಗಳಿಗೆ ನೀರು ಮರುಪೂರಣ(ಬೋರ್ ವೆಲ್ ರಿಚಾರ್ಜ್) ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ದುಡಿಯೋಣ ಬಾ ಅಭಿಯಾನದ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ನರೇಗಾ ಯೋಜನೆಯಡಿ ದೀರ್ಘಕಾಲ ಮೇಟ್ ಆಗಿ ಕಾರ್ಯನಿರ್ವಹಿಸುವ, ಅನುಭವ ಹೊಂದಿರುವ ಹಾಗೂ ನಾಯಕತ್ವ ಹೊಂದಿರುವವರನ್ನು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಅಭಿಯಾನದ ಅವಧಿಗೆ *”ದುಡಿಯೋಣ ಬಾ ಅಭಿಯಾನ ರಾಯಭಾರಿ”* ಆಗಿ ನೇಮಿಸಲಾಗುವುದು.
ನರೇಗಾ ಅಡಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಬೇಸಿಗೆ ಅವಧಿಯಲ್ಲಿ ಎಪ್ರಿಲ್ 01 ರಿಂದ 60 ದಿನಗಳು ಕೆಲಸ ನಿರ್ವಹಿಸಿದಲ್ಲಿ, ಪ್ರತಿದಿನಕ್ಕೆ 289ರೂ.ಗಳಂತೆ 60 ದಿನಗಳಿಗೆ ₹17,340 ರೂ.ಗಳ ಕೂಲಿ ಪಡೆಯಬಹುದಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಜನರು ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

