
ಬೆಂ.ಗ್ರಾ.ಜಿಲ್ಲೆ: ಕ್ಷಯ ರೋಗ ಹರಡುವಿಕೆ ಹಾಗೂ ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಬೀದಿ ನಾಟಕ, ವಿವಿಧ ಮಾಧ್ಯಮಗಳ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “ಜಿಲ್ಲಾ ಮಟ್ಟದ ಕ್ಷಯ ರೋಗ ವೇದಿಕೆ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯ ರೋಗದ ಕುರಿತು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಅರಿವು ಮೂಡಿಸಿದಾಗ ತಮ್ಮ ವ್ಯಾಪ್ತಿಯ ಜನರಿಗೆ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದು ಹೇಳಿದರು.
ಕ್ಷಯ ರೋಗ ಲಕ್ಷಣಗಳಿರುವ ಕಫ ಪರೀಕ್ಷೆ ಮಾಡಿಸಿ ಎಂದರಲ್ಲದೆ, ಕೈಗಾರಿಕಾ ಪ್ರದೇಶದ ಸುತ್ತಮುತ್ತಲು ವಾಸವಿರುವ ಜನರಿಗೆ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ 6 ತಿಂಗಳಿಗೊಮ್ಮೆ ಕ್ಷಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ, ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಗುರುತಿಸಿ, ಆರೋಗ್ಯ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯವಂತರನ್ನಾಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಲಸಿಕೆಯನ್ನು ಪಡೆಯಲು ಸಾರ್ವಜನಿಕರು ಮುಂದಾಗದ ಕಾರಣ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ ಲಸಿಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಾದ್ಯಂತ 61 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದರು.
ಹಳ್ಳಿಗಳಿಗೆ ತಮ್ಮ ಆಂಬುಲೈನ್ಸ್‌ಗಳಲ್ಲಿ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಎನ್.ಜಿ.ಓ. ವಾಹನಗಳ ಸಹಕಾರದಿಂದ ಹಳ್ಳಿಗಳಿಗೆ ತೆರಳಿ ಸಾರ್ವಜನಿಕರನ್ನು ವಾಹನಗಳಲ್ಲಿ ಕರೆತಂದು ಕೋವಿಡ್ ಲಸಿಕೆ ಪಡೆಯುವಂತೆ ವ್ಯವಸ್ಥೆ ಕಲ್ಪಿಸಲು ತಿಳಿಸಿದರಲ್ಲದೆ,
ಜಿಲ್ಲೆಯಲ್ಲಿ ಏಪ್ರಿಲ್ 15 ರಿಂದ 30 ರವರೆಗೆ ಜಂತುಹುಳು ಮಾತ್ರೆ ನೀಡಲು ಸೂಚಿಸಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿರುವ 272918 ಮಕ್ಕಳಿಗೆ ಜಂತು ಹುಳು ನಿವಾರಕ ಮಾತ್ರೆಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷಯ ರೋಗದಿಂದ ಗುಣಮುಖರಾದವರು ಸಭೆಯಲ್ಲಿ ಭಾಗಿಯಾಗಿ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ರಾಯಭಾರಿಯಾಗಿರುವ ಡಾ.ಹುಲಿಕಲ್ ನಟರಾಜ್ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಸಭೆಯಲ್ಲಿ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದ ಮಾಹಿತಿ ಕುರಿತ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಘಟಕದ ಸಂಚಾಲಕಿ ಡಾ.ಶಕೀಲಾ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಕುಷ್ಠರೋಗ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ.ಶಾಂತಲಾ, ತಾಲ್ಲೂಕು ವೈದ್ಯಾಧಿಕಾರಿಗಳು, ಎನ್.ಜಿ.ಓ. ಸಂಸ್ಥೆಗಳ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

