
ತುಮಕೂರು: ಬ್ಲಾಸ್ಟಿಂಗ್ ಶಬ್ಧದಿಂದ ಮೃತಪಟ್ಟ 3 ತಿಂಗಳ ಹಸುಗೂಸಿನ ಶವವನ್ನು ಗುಂಡಿಯಿಂದ ಮೇಲೆತ್ತಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿಯಲ್ಲಿ ನಡೆದಿದೆ.

ಜಂಪೇನಹಳ್ಳಿಯ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಪೈಪ್ ಲೈನ್ ಅಳವಡಿಕೆಗೆ ಅಡ್ಡಿಯಾಗಿದ್ದ ಕಲ್ಲುಬಂಡೆಯನ್ನು ಸ್ಥಳೀಯರ ಗಮನಕ್ಕೆ ತರದೇ ಶನಿವಾರ ರಾತ್ರಿ ಬ್ಲಾಸ್ಟ್ ಮಾಡಲಾಗಿದ್ದು, ತೀವ್ರವಾದ ಶಬ್ಧಕ್ಕೆ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಕೈಮರ ಗ್ರಾಮದ ದಂಪತಿ ರಂಗನಾಥ್ ಮತ್ತು ನೇತ್ರಾವತಿಯ 3 ತಿಂಗಳ ಹೆಣ್ಣುಮಗು ಮೃತಪಟ್ಟಿದೆ.
ಮಗುವಿನ ಅಂತ್ಯಸಂಸ್ಕಾರಕ್ಕೆ ಸ್ವಂತ ಜಮೀನು ಇಲ್ಲದ ಕಾರಣ, ಬೇರೆ ದಾರಿಯಿಲ್ಲದೆ ದಂಪತಿ ಸುವರ್ಣಮುಖಿ ನದಿಯ ರಾಜಕಾಲುವೆ ದಡದಲ್ಲಿ ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲೇ ಗುಂಡಿ ತೆಗೆದು ಬಾಳೆ ಎಲೆ ಜೋಡಿಸಿ ಮಗುವಿನ ಶವ ಹೂತಿದ್ದರು. ಇದಕ್ಕೆ ಸಮೀಪದ ಖಾಸಗಿ ಗಾರ್ಮೆಂಟ್ಸ್ ಸೆಕ್ಯುರಿಟಿ ಗಾರ್ಡ್ ಶಿವಲಿಂಗಯ್ಯ ಇದು ತಮ್ಮ ಗಾರ್ಮೆಂಟ್ಸ್ ಗೆ ಸೇರಿದ ಜಾಗ ಎಂದು, ಅಮಾನವೀಯ ವರ್ತನೆ ತೋರಿ ಮಗುವಿನ ಶವ ಮೇಲೆತ್ತಿಸಿದ್ದಾನೆ ಎಂದು ದೂರಿರುವ ಪೋಷಕರು ನದಿಯ ಮಧ್ಯೆದಲ್ಲೇ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿ ಕುಟುಂಬ ಕಣ್ಣೀರಿಟ್ಟಿದೆ.
ಗಾರ್ಮೆಂಟ್ಸ್ ಮಾಲೀಕ ಸುವರ್ಣಮುಖಿ ನದಿ, ರಾಜಕಾಲುವೆ, ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಪೌಂಡ್ ನಿರ್ಮಿಸಿರುವ ಆರೋಪವಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ತಹಸೀಲ್ದಾರ್ ಗೋವಿಂದರಾಜ್ ತತ್ ಕ್ಷಣ ಸರ್ವೆ ನಡೆಸಿ ಸೂಚಿಸಿದ್ದು, ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅಲ್ಲದೆ ಬ್ಲಾಸ್ಟಿಂಗ್ ನಿಂದ ಮಗು ಮೃತಪಟ್ಟಿದೆ ಎಂದು ಪೋಷಕರಿಂದ ಮಾಹಿತಿ ಪಡೆದಿದ್ದೇವೆ. ಮಗುವಿನ ಶವ ಮೇಲೆತ್ತಿಸಿರುವುದು ಅಮಾನವೀಯ ಘಟನೆ. ಬಲವಂತದಿಂದ ಗಾರ್ಮೆಂಟ್ಸ್ ಸೆಕ್ಯುರಿಟಿ ಗಾರ್ಡ್ ಶವ ಎತ್ತಿಸಿದ್ದಾನೆ. ಸುವರ್ಣಮುಖಿ ನದಿ ಹಾಗೂ ರಾಜಕಾಲುವೆ ಸರ್ವೆಗೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದವರು ಸ್ಪಷ್ಟಪಡಿಸಿದ್ದಾರೆ. (ವರದಿ.M.ನಾಯಕ್ ತುಮಕೂರು)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

