
ದೊಡ್ಡಬಳ್ಳಾಪುರ: ನಗರದ ದೇವಾಂಗ ಮಂಡಲಿಯ ಸರ್ವ ಸದಸ್ಯರ ಸಭೆ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆಯಿತು. ಈ ವೇಳೆ ಸಭೆಯ ಆರಂಭದಲ್ಲಿ ಅಗಲಿದ ಸಮುದಾಯದ ಮುಖಂಡರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಮಂಡಲಿಯ ಆಡಳಿತಾತ್ಮಕ ವರದಿಯನ್ನು ಮಂಡಿಸಿದ ಮಂಡಲಿಯ ಗೌ.ಕಾರ್ಯದರ್ಶಿ ಎ.ಎಸ್.ಕೇಶವ, ದೇವಾಂಗ ಮಂಡಲಿಯ ವ್ಯಾಪ್ತಿಯಲ್ಲಿ 15 ಕಡೆ ಸ್ವತ್ತುಗಳಿದೆ. ಮಂಡಲಿ ಆರ್ಥಿಕವಾಗಿ ಸದೃಢವಾಗಿದ್ದು, ಸಾಲದ ಸುಳಿಗೆ ಸಿಕ್ಕಿಲ್ಲ. ಗಾಯತ್ರಿ ಕಾಂಪ್ಲೆಕ್ಸ್, ರಂಗಪ್ಪ ವೃತ್ತದ ಬಳಿಯಿರುವ ವಾಣಿಜ್ಯ ಸಂಕೀರ್ಣದಿಂದ ಮಂಡಲಿಗೆ ಆದಾಯ ಹೆಚ್ಚಾಗಿದೆ. ದೇವಾಂಗ ಮಂಡಲಿ ನಿರ್ವಹಿಸುತ್ತಿರುವ ಮುಕ್ತಿಧಾಮದ ಖಾತೆ ಬದಲಾವಣೆಗೆ ಇದ್ದ ಸಮಸ್ಯೆ ಬಗೆ ಹರಿದಿದ್ದು ಈಗ ದೇವಾಂಗ ಮಂಡಲಿ ಹೆಸರಿಗೆ ಖಾತೆ ಆಗಿದ್ದು, ಮಹತ್ತರ ಸಾಧನೆಯಾಗಿದೆ. ಮುಕ್ತಿದಾಮ ಆರಂಭವಾದಾಗಿನಿಂದು ಸುಮಾರು 4.5 ಸಾವಿರ ಮೃತ ದೇಹಗಳ ಅಂತ್ಯಕ್ರಿಯೆ ನಡೆದಿದ್ದು, ದೊಡ್ಡಬಳ್ಳಾಪುರ ಮಾತ್ರವಲ್ಲದೆ ನೆರೆಯ ರಾಜಾನುಕುಂಟೆ, ಮಾರಸಂದ್ರ ಮೊದಲಾದ ಕಡೆಗಳಿಂದಲೂ ಅಂತ್ಯಕ್ರಿಯೆ ನೆರವೇರಿಸಲು ಬರುತ್ತಿದ್ದಾರೆ. ನಗರದ ರಮಾನಂದ ಆಶ್ರಮದ ಆಸ್ತಿಯನ್ನು ದೇವಾಂಗ ಜಗದ್ಗುರುಗಳೊಂದಿಗೆ ಚರ್ಚೆ ನಡೆಸಿ ದೇವಾಂಗ ಮಂಡಲಿ ಸುಬರ್ದಿಗೆ ಪಡೆಯುವ ಕಾರ್ಯವಾಗಬೇಕಿದ್ದು, ಈ ಕುರಿತು ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ 2016ರಿಂದ 2020 ರವರೆಗೆ ಮಂಡಲಿಯ ಆರ್ಥಿಕ ವ್ಯವಹಾರಗಳನ್ನು ಮಂಡಿಸಿ, ಮಂಡಲಿಯು 9.5 ಲಕ್ಷ ರೂ ಆದಾಯ ತೆರಿಗೆ ಹಾಗೂ 6ಲಕ್ಷ ರೂ ಜಿಎಸ್ಟಿಯನ್ನು ಪ್ರತಿವರ್ಷ ಸರ್ಕಾರಕ್ಕೆ ಪಾವತಿಸುತ್ತಿದೆ ಎಂದರು.
ದೇವಾಂಗ ಮಂಡಲಿ ಸದಸ್ಯರು ಆಯ್ಕೆ ಮಾಡಿ ಕಳಿಸಿರುವ ಕಾರ್ಯಕಾರಿ ಸಮಿತಿಯವರು ರಾಜೀನಾಮೆ ನೀಡುತ್ತಿರುವ ಪ್ರಕರಣಗ್ಳು ಹೆಚ್ಚಾಗುತ್ತಿರುವುದರಿಂದ ಮಂಡಲಿಗೆ ಮೇಲೆ ಸದಸ್ಯರಿಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಅನಗತ್ಯ ರಾಜೀನಾಮೆ ನೀಡುವುದು ತಪ್ಪಬೇಕು. ರಾಜೀನಾಮೆ ನೀಡಿರುವವರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವ ಕುರಿತು ಇರುವ ಸಂಘದ ಬೈಲಾ ತಿದ್ದುಪಡಿಯಾಗಬೇಕು. ಇದಕ್ಕೆ ವಿಶೇಷ ಸಭೆ ಕರೆಯಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಮಂಡಲಿಯ ಪ್ರಭಾರಿ ಅಧ್ಯಕ್ಷ ಕೆ.ಜಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಯೋಗ ನಟರಾಜ್ ಸೇರಿದಂತೆ ಸಂಘದ ನಿರ್ದೇಶಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

