
ದೊಡ್ಡಬಳ್ಳಾಪುರ: ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ರೈತರ ಮಾರುಕಟ್ಟೆ ಮಳಿಗೆಗಳ ಸ್ಥಾಪನೆ ಅಗತ್ಯವಾಗಿದ್ದು, ಕೃಷಿ ವಿಜ್ಞಾನ ಕೇಂದ್ರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರಿಗೆ ಮಾಹಿತಿ ನೀಡುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ತಿಳಿಸಿದರು.

ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯ 15ನೇ ವಾರ್ಷಿಕೋತ್ಸವ ಹಜ್ಜೆ ಗುರುತುಗಳು ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರು ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕಿದೆ. ಸಹಜವಾದ ಕೃಷಿಯೊಂದಿಗೆ ಹೂ, ತರಕಾರಿ ಬೆಳೆಯುವುದು, ಕೋಳಿ, ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳಬೇಕಿದೆ. ಇಂದಿನ ಯುವಕರು ಕೃಷಿಯತ್ತ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರಗಳಿಂದ ಆಕಾರ್ಯಕ್ರಮ ರೂಪಿಸಿ, ಯುವಕರನ್ನು ಕೃಷಿಗೆ ಹುರಿದುಂಬಿಸಿ ಅಗತ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ನೀರು, ಮಣ್ಣು ಮೊದಲಾಗಿ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ರೈತರಿಗೆ ಪ್ರಾಯೋಗಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಮಾದರಿಯಾಗಿವೆ ಎಂದು ತಿಳಿಸಿದರು.
ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದ್ದು, ಕೃಷಿಯಲ್ಲಿ ನೂತನ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಿದೆ. ರೈತರು ಕೃಷಿ ಉತ್ಪನ್ನಗಳಷ್ಟೇ ಅಲ್ಲದೇ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವತ್ತ ಗಮನ ಹರಿಸಬೇಕು. ಮುದೋಳದ ನಾಯಿ ತಳಿಯ ಕುರಿತಾಗಿ ಪ್ರಧಾನಿ ಅವರು ಆಡಿದ ಮಾತಿಗೆ ಈಗ ಅದರ ಬೇಡಿಕೆ ಹೆಚ್ಚಾಗಿದೆ. ಕಿಸಾನ್ ಆ್ಯಪ್‍ಗಳಲ್ಲಿ ತಮ್ಮ ಉತ್ಪನ್ನಗಳ ಕುರಿತಾಗಿ ಪ್ರಚಾರ ಕೈಗೊಳ್ಳಬೇಕು. ರಾಮನಗರದ ರೈತರ ಉತ್ಪನ್ನಗಳು ಕೇರಳದಲ್ಲಿ ಮಾರಾಟವಾಗುತ್ತಿರುವುದನ್ನು ನಾನು ಕಂಡಿದ್ದೇನೆ. ಕೃಷಿ ವಿಜ್ಞಾನ ಕೇಂದ್ರಗಳು ಸ್ವಾಭಾವಿಕ ಸಂಪನ್ಮೂಲಗಳ ಸದ್ಬಳಕೆಯಾಗುವಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ರೈತರ ಆರ್ಥಿಕ ಸ್ವಾವಲಂಭನೆಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, ರೈತರು ಒಂದೇ ರೀತಿಯ ಬೆಳೆಯನ್ನು ಬೆಳೆಯದೇ ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು. ರೈತರ ಸಂಘಟನೆಗಳನ್ನು ಬೆಳೆಸಿಕೊಂಡು ಮಾರುಕಟ್ಟೆ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾದ ಬಗೆಯನ್ನು ಸ್ಮರಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇಂದ್ರದ ಕಾರ್ಯಕ್ರಮಗಳನ್ನು ಪ್ರಶಂಸಿಸಿ, ಅನುಷ್ಟಾನಗೊಳಿಸಲು ಪ್ರಧಾನಿಗೆ ಪತ್ರ ಬರೆದಿದ್ದನ್ನು ನೆನಪಿಸಿಕೊಂಡರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಂ.ಬೈರೇಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಕೃಷಿ ವಿವಿಯ ವಿಶ್ರಾಂತ ವಿಸ್ತರಣಾ ನಿರ್ದೇಶಕರು, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎಚ್.ಅಪ್ಪಯಣ್ಣ ಕೃಷಿ ವಿವಿಯ ಮುಖ್ಯಸ್ಥರಾದ ಸಾವಿತ್ರಮ್ಮ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟಮಾತನಾಡಿ, ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

