ಬೆಂ.ಗ್ರಾ.ಜಿಲ್ಲೆ: ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಪ್ರಮುಖವಾಗಿದ್ದು, ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ನೆರವಾಗಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ, ವಿವಿಧ ಕಾಮಗಾರಿಗಳ ಪ್ರಗತಿ ವಿವರಗಳ ಪರಿಶೀಲನೆಗೆಂದು ಅವರು ಜಿಲ್ಲೆಗೆ ಆಗಮಿಸಿ, ಜಿಲ್ಲೆಯ ವಿವಿದೆಡೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾತನಾಡಿದರು.
ದೇವನಹಳ್ಳಿ ತಾಲ್ಲೂಕಿನ ಪುರಸಭೆ ಹಿಂಭಾಗದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಎರಡನೇ ಡೋಸ್ ಲಸಿಕೆಯನ್ನು ಸರ್ಕಾರ ನಿಗದಿಪಡಿಸಿರುವ ಅವಧಿಗೆ ತಕ್ಕಂತೆ ನೀಡಿ ಎಂದರಲ್ಲದೆ, ಹಂತ ಹಂತವಾಗಿ ಲಸಿಕೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ ಎಂದರು.ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರಿಗೆ ಸೂಕ್ತ ಸಮಯಕ್ಕೆ ವೈದ್ಯಕೀಯ ಕಿಟ್ ವಿತರಣೆ ಮಾಡಬೇಕು. ಪ್ರತಿ ದಿನ ದೂರವಾಣಿ ಮೂಲಕ ಸೋಂಕಿತರನ್ನು ಸಂಪರ್ಕಿಸಿ, ಅವರ ಆರೋಗ್ಯದ ಮಾಹಿತಿಯನ್ನು ಪಡೆಯಬೇಕು ಹಾಗೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ನಂತರ ದೇವನಹಳ್ಳಿ ನಗರ ವ್ಯಾಪ್ತಿಯ ಕೋಟೆ ಶಾಲೆಯ ಹತ್ತಿರ ನಡೆಯುತ್ತಿರುವ ಮಕ್ಕಳ ಮೊಬೈಲ್ ಕ್ಲಿನಿಕ್ ಗೆ ಭೇಟಿ ನೀಡಿ, ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು ಹಾಗೂ ವಿಜಯಪುರ ಹೋಬಳಿ ವ್ಯಾಪ್ತಿಯಲ್ಲಿರುವ ಮಕ್ಕಳ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೋವಿಡ್ ಮೂರನೇ ಅಲೆ ಎದುರಾಗದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾಡಳಿತದ ಕುರಿತು ಹರ್ಷ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡ, ಬದುಗಳ ನಿರ್ಮಾಣ ಕಾರ್ಯ, ಕಲ್ಯಾಣಿ ಹಾಗೂ ಅಂಗನವಾಡಿ ಕಟ್ಟಡಗಳನ್ನು ವೀಕ್ಷಿಸಿದರು ಹಾಗೂ ಬಾಲೇಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಯೋಜನೆಯಡಿ ನಿರ್ಮಿಸಲಾಗಿರುವ ದಾಳಿಂಬೆ ಫಾರಂ ಹೌಸ್ ಗೆ ಭೇಟಿ ನೀಡಿ, ಮಾತನಾಡಿದ ಅವರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಕೆರೆ, ಕುಂಟೆ, ಗೋಕಟ್ಟೆ, ನಾಲೆ ಹಾಗೂ ಕಲ್ಯಾಣಿಗಳ ಸ್ವಚ್ಛತೆ ಹಾಗೂ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಬೇಕು ಮತ್ತು ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಆರ್. ರವಿಕುಮಾರ್, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಪ್ಪೇಸ್ವಾಮಿ, ತಹಶೀಲ್ದಾರ್ ಅನಿಲ್ ಕುಮಾರ್, ಹಿರಿಯ ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಧರ್ಮೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್, ಪುರಸಭೆ ಮುಖ್ಯಾಧಿಕಾರಿ ನಾಗರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….