ಬೆಂ.ಗ್ರಾ.ಜಿಲ್ಲೆ: ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದ್ದು, ನಿರಂತರವಾಗಿ ಯೋಗವನ್ನು ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ ಹಾಗೂ ಸುರಪನೇನಿ ವಿದ್ಯಾಸಾಗರ್ ಫೌಂಡೇಶನ್ ವತಿಯಿಂದ ದೇವನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಂದು ಏರ್ಪಡಿಸಲಾಗಿದ್ದ ‘ಸ್ವಾಸ್ಥ್ಯಕ್ಕಾಗಿ ಯೋಗ – ಮನೆಯಲ್ಲಿಯೇ ಇದ್ದು ಯೋಗವನ್ನು ಆಚರಿಸಿ’ ಎಂಬ ಘೋಷವಾಕ್ಯದೊಂದಿಗಿನ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಕ್ರೀಯಾಶೀಲವಾಗಿ ಕೆಲಸ ಮಾಡಲು ಯೋಗ ಸಹಕಾರಿಯಾಗಲಿದ್ದು, ಯೋಗ, ಪ್ರಾಣಾಯಾಮ ಮಾಡುವುದರಿಂದ ಕೋವಿಡ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂದರು.
ಸೂರಪನೇನಿ ವಿದ್ಯಾ ಸಾಗರ್ ಫೌಂಡೇಶನ್ ಜಿಲ್ಲೆಯ ಹಲವು ಕೋವಿಡ್ ಕೇರ್ ಸೆಂಟರ್‌ಗೆ ತೆರಳಿ, ಅಲ್ಲಿರುವ ಸೋಂಕಿತರಿಗೆ ಯೋಗವನ್ನು ಕಲಿಸುವ ಮೂಲಕ ಅವರಲ್ಲಿ ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶ ಹಾಗೂ ಕಂಠದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಕೋವಿಡ್ ಎರಡನೇ ಅಲೆಯನ್ನು ಯಶಸ್ವಿಯಾಗಿ ತಡೆಯಲು ಅನುಕೂಲವಾಗುತ್ತದೆ ಎಂದರು.
ದೀರ್ಘವಾಗಿ ಉಸಿರಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಸರಬರಾಜಾಗುತ್ತದೆ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದರಲ್ಲದೆ, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ವೃದ್ಧಿಸುತ್ತದೆ ಎಂದು ಯೋಗ ಮತ್ತು ಪ್ರಾಣಾಯಾಮದ ಮಹತ್ವ ತಿಳಿಸಿದರು.
ಯೋಗ ದಿನಾಚರಣೆಯನ್ನು ವರ್ಚುವಲ್ ಮೂಲಕ ನಡೆಸಲಾಗಿದ್ದು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಜೂಮ್ ಆ್ಯಪ್ ಮೂಲಕ ಪಾಲ್ಗೊಂಡಿದ್ದರು.
ಸೂರಪನೇನಿ ವಿದ್ಯಾ ಸಾಗರ್ ಫೌಂಡೇಶನ್ ನ ಅಧ್ಯಕ್ಷ ವಿದ್ಯಾಸಾಗರ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಅಕ್ಕಿಮ್, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..