ದೊಡ್ಡಬಳ್ಳಾಪುರ: ನೀರನ್ನು ಪೂರೈಸಿ ಎಂದು ಒತ್ತಾಯಿಸುವವರ ನಡುವೆ, ನಮ್ಮೂರಲ್ಲಿ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದ್ದು ಟ್ಯಾಂಕ್ ದುರಸ್ಥಿ ಮಾಡಿಸಿ ಎಂದು ಗ್ರಾಮಪಂಚಾಯಿತಿಯನ್ನು ಗ್ರಾಮಸ್ಥರು ಒತ್ತಾಯಿಸುತ್ತಿರುವ ಘಟನೆ ತಾಲೂಕಿನಲ್ಲಿ ಕಂಡುಬಂದಿದೆ.
ತಾಲೂಕಿನ ಆರೂಢಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿಂಗ್ರಯ್ಯನಪಾಳ್ಯದಲ್ಲಿ ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರಿಗೆ ಕಡಿವಾಣ ಹಾಕುವಂತೆ, ಸಾಮಾಜಿಕ ಜಾಲತಾಣದ ಮೂಲಕ ಯುವಕರು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಸಿಂಗ್ರಾಯನಪಾಳ್ಯ ಗ್ರಾಮದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ಗೆ ಅಳವಡಿಸಿರುವ ಕೊಳಾಯಿಗಳು ಹಾಳಾಗಿರುವ ಕಾರಣ ಕಳೆದ ಹಲವು ದಿನಗಳಿಂದ ನೀರು ವ್ಯರ್ಥವಾಗಿ ಹರಿದುಹೊಗುತ್ತಿದೆ. ಅಲ್ಲದೆ ಈ ಟ್ಯಾಂಕ್ ಗಳನ್ನು ಹಲವು ತಿಂಗಳು ಕಳೆದರು ಸ್ವಚ್ಚಗೊಳ್ಳಿಸುತ್ತಿಲ್ಲ ಎಂಬ ಆರೋಪ ಯುವಕರದ್ದಾಗಿದೆ.
ಆರೂಢಿ ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡಗುಂಡಪ್ಪನಾಯಕನಹಳ್ಳಿ ವಾರ್ಡ್ಗೆ ಈ ಗ್ರಾಮ ಸೇರಿದ್ದು, ಇಬ್ಬರು ಮಹಿಳಾ ಸದಸ್ಯರು, ಓರ್ವ ಪುರುಷ ಸದಸ್ಯ ಗ್ರಾಪಂಗೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅನುದಾನದ ಕುರಿತು ಆಡಳಿತ – ವಿರೋಧ ಪಕ್ಷಗಳ ಮಾತಿನ ಸಮರವೇ ನಡೆದು ಹೋಗಿದೆ.
ಕುಡಿಯುವ ನೀರಿನ ಸಮಸ್ಯೆಗೆ ಅಂತರ್ಜಲ ಸಮಸ್ಯೆ ಒಂದಾದರೆ, ನೀರನ್ನು ಸಮರ್ಪಕವಾಗಿ ಪೂರೈಸದೆ ಇರುವುದು, ಪೋಲಾಗುವ ನೀರಿಗೆ ಕಡಿವಾಣ ಹಾಕದೇ ಇರುವುದು ಸಹ ಹೆಚ್ಚು ಕಾರಣವಾಗಿದೆ.
ತಾಲೂಕಿನಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರಿಗೆ ತಡೆಒಟ್ಟಲು ಗ್ರಾಮಪಂಚಾಯಿತಿಗಳು ಮುಂದಾಗುತ್ತಿಲ್ಲ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇನ್ನಾದರೂ ಗ್ರಾಪಂ ಅಧಿಕಾರಿಗಳು, ಸ್ಥಳೀಯ ಚುನಾಯಿತ ಜನಪ್ರತಿನಿದಿಗಳು ಹೆಚ್ಚೆತ್ತು ಪೋಲಾಗುವ ನೀರಿಗೆ ಕಡಿವಾಣ ಹಾಕುವರೆ ಕಾದು ನೋಡಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..