ದೊಡ್ಡಬಳ್ಳಾಪುರ: ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅಗತ್ಯವಾಗಿದೆ ಎಂದು ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳ ನಿರ್ದೇಶಕ ಜೆ.ರಾಜೇಂದ್ರ ತಿಳಿಸಿದರು.
ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗದೊಂದಿಗೆ ಮನೆಯಲ್ಲಿರಿ ಎಂಬ ಘೋಷವಾಕ್ಯದೊಂದಿಗೆ ಆನ್ ಲೈನ್ನಲ್ಲಿ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
2015 ರಿಂದ ಪ್ರತಿ ವರ್ಷವು ಜೂನ್-21 ರಂದು ಅಂತಾರಾಷ್ಟೀಯ ಯೋಗ ದಿನಾಚರಣೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ವಿಶ್ವ ಯೋಗ ದಿನವನ್ನಾಗಿ ಭಾರತ ದೇಶವಲ್ಲದೆ ಇಡಿ ಜಗತ್ತಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಯೋಗ ಭಾರತದ್ದಾದರೂ ವಿದೇಶಗಳಲ್ಲಿ ಹೆಚ್ಚು ಮಹತ್ವಗಳಿಸಿದೆ. ಈ ಹಿನ್ನೆಲೆಯಲ್ಲಿ ಯೋಗದ ಮಹತ್ವವನ್ನು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ದೇವಿಕಾರಾಣಿ ಮಾತನಾಡಿ, ಪ್ರತಿ ವರ್ಷದಂತೆ ಜೂನ್-21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ಪ್ರಸಕ್ತ ವರ್ಷ ಕೋವಿಡ್-19 ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಸರ್ಕಾರವು ನಿಷೇಧಿಸುವುದರಿಂದ ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಸೂಚನೆಯನ್ವಯ ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಮನೆಯಲ್ಲಿಯೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಯೋಗ ಎಂಬ ಪದ ಮನಸ್ಸು, ದೇಹ, ಆತ್ಮಗಳನ್ನು ಒಂದುಗೂಡಿಸುದಾಗಿದ್ದು, ಮಾನಸಿಕ ದೃಢತೆ, ಸ್ಮರಣಶಕ್ತಿ, ಸಂಕಲ್ಪಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ದೇಹವನ್ನು ಆರೋಗ್ಯ ಪೂರ್ಣಗೊಳಿಸಿ ಮನಸ್ಸನ್ನು ಪ್ರಶಾಂತ ಮಾಡುತ್ತದೆ, ಯೋಗ, ಧ್ಯಾನ, ಪ್ರಾಣಾಯಾಮದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಿ ರೋಗ ಮುಕ್ತ ದೇಹವನ್ನಾಗಿ ಪರಿವರ್ತಿಸಲು ಯೋಗ ಸಹಾಯಕವಾಗಿದೆ ಎಂದು ತಿಳಿಸಿದರು.
ಯೋಗ ಶಿಕ್ಷಕ ವಿನೋದ್ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗಪಟುಗಳಾದ ಕುಮಾರಿ ತನಿಷಾ.ಜಿ.ಬಿ, ಶಂಶಾಂಕ್.ಪಿ.ಎಸ್, ಹಾಗೂ ಗೋಕುಲ್ ಸಮೃತ್ ಯೋಗ ಭ್ಯಾಸ ನಡೆಸಿದರು, ಈ ಕಾರ್ಯಕ್ರಮದಲ್ಲಿ ಆನ್ಲೈನ್ ಐನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ಉಪ ಪ್ರಾಂಶುಪಾಲರಾದ ಧನಂಜಯ್, ರಾಕೇಶ್, ವ್ಯವಸ್ಥಾಪಕ ರವಿಕುಮಾರ್ ಹಾಗೂ ಶಿಕ್ಷಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..