ದೊಡ್ಡಬಳ್ಳಾಪುರ: ದೇಶದಲ್ಲಿ ಕರೊನಾ ಸೋಂಕು ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ, ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಬಕ್ರೀದ್ ಹಬ್ಬದ ಆಚರಣೆ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾರ್ದ ಕಾಪಾಡಬೇಕು ಎಂದು ಡಿವೈಎಸ್ಪಿ ಟಿ.ರಂಗಪ್ಪ ಹೇಳಿದರು.
ನಗರದ ವೃತ್ತ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಮುಖಂಡರೊಂದಿಗೆ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸೂಚನೆ ಅನ್ವಯ ಈದ್ಗಾ ಮೈದಾನಗಳಲ್ಲಿ ಈ ಬಾರಿ ಪ್ರಾರ್ಥನೆ ಮಾಡುವಂತಿಲ್ಲ. ತೆರೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಮಾಡಲು ಸರ್ಕಾರ ಆದೇಶ ನೀಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗಸೂಚಿ ಪಾಲಿಸಬೇಕಾಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಮಾತನಾಡಿ, ಬಕ್ರೀದ್ ಹಬ್ಬವನ್ನು ಹಿಂದಿನ ವರ್ಷ ಶಾಂತಿಯುತವಾಗಿ ಆಚರಿಸಿದಂತೆ ಈ ಬಾರಿಯೂ ಶಾಂತಿಯುತವಾಗಿ ಆಚರಿಸಲು ಎಲ್ಲಾ ಸಮುದಾಯದವರು ಕೈ ಜೋಡಿಸಬೇಕು. ಹಬ್ಬದ ಸಂದರ್ಭದಲ್ಲಿ ಪ್ರಚೋದನಾಕಾರಿ ಚಟುವಟಿಕೆ ನಡೆಯಂತೆ ನೋಡಿಕೊಳ್ಳಿ. ನಾಗರಿಕರ ಹಿತ ಕಾಪಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿ. ಹೊರಗಡೆಯಿಂದ ಬಂದು ಇಲ್ಲಿ ದೊಂಬಿ ಗಲಾಟೆ ಮಾಡುವುದು ಅಥವಾ ಸಣ್ಣಪುಟ್ಟ ಅಹಿತಕರ ಘಟನೆ ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಈ ವೇಳೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..