ಚಿಕ್ಕಬಳ್ಳಾಪುರ: ಇದೇ ತಿಂಗಳ ಜು.21 ರಂದು ರಾಜ್ಯಾದ್ಯಂತ ಬಕ್ರೀದ್ ಹಬ್ಬ ಆಚರಿಸುವುದರಿಂದ ಅನಧಿಕೃತವಾಗಿ ಗೋವು, ಕರುಗಳು, ಒಂಟೆಗಳು ಮತ್ತು ಇತರೆ ಜಾರುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ಹಾಗೂ ವಧೆ ಮಾಡುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲೂ ಅಕ್ರಮ ಸಾಗಾಟ ಹಾಗೂ ವಧೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಪೊಲೀಸ್ ಇಲಾಖೆ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಜಾನುವಾರುಗಳ ಅಕ್ರಮ ಸಾಗಾಣಿಗೆ ಹಾಗೂ ವಧೆ ತಡೆಗಟ್ಟುವ ಸಂಬಂಧ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಗೋಹತ್ಯೆ ಕಾಯ್ದೆಯು ಜಾರಿಯಾಗಿದ್ದು, ಜು.21 ರಂದು ರಾಜ್ಯಾಧ್ಯಂತ ಬಕ್ರೀದ್ ಹಬ್ಬವನ್ನು ಆಚರಿಸುವುದರಿಂದ ಸಹಜವಾಗಿಯೇ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಈ ನಿಟ್ಟಿನಲ್ಲಿ ಅನಧಿಕೃತವಾಗಿ ಜಾನುವಾರುಗಳ ಸಾಗಾಣಿಕೆ ಹಾಗೂ ವಧೆ ಹೆಚ್ಚಾಗಲಿದ್ದು, ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕಾಗಿದೆ ಎಂದರು.
ರಾಜ್ಯದಲ್ಲಿ ಗೋ ಹತ್ಯೆ ಸಂಪೂರ್ಣ ನಿಷೇಧವಾಗಿದ್ದು, ಎಮ್ಮೆ ಹಾಗೂ ಕೋಣಗಳಿಗೆ ಮಾತ್ರ 13 ವರ್ಷ ವಯಸ್ಸಾದ ಬಳಿಕ ವಧೆ ಮಾಡಬಹುದು ಎಂಬ ಹೊಸ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಆಕ್ರಮವಾಗಿ ಸಾಕಾಣಿಕೆ ಹಾಗೂ ವಧೆ ಮಾಡುವವರನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಬೀಗಿ ಭದ್ರತಾ ಕ್ರಮಗಳನ್ನು ಜರುಗಿಸಬೇಕು. ನಗರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಾಣಿ ವಧೆಗೆ ಯಾವುದೇ ಅನುಮತಿ ನೀಡಬಾರದು. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಹೆಚ್ಚು ಜಾಗೃತರಾಗಿರಬೇಕು. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ದಡಿ ಪ್ರಕರಣ ದಾಖಲಿಸಬೇಕು ಎಂದರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯು ಆಂಧ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಗಡಿ ಬಾಗಗಳ ಮೂಲಕ ಜಾನುವಾರುಗಳ ಸಾಗಾಣಿಗೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಆಂಧ್ರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡಿಲ್ಲ. ಹಾಗಾಗಿ ಅಲ್ಲಿ ಪ್ರಾಣಿ ವಧೆಗೆ ಯಾವುದೇ ಅಡ್ಡಿಗಳು ಇರುವುದಿಲ್ಲ. ಹಾಗಾಗಿ ನಮ್ಮ ಜಿಲ್ಲೆಯ ಗಡಿ ಭಾಗಗಳ ಮೂಲಕ ಜಿಲ್ಲೆಗೆ ಆಗಮಿಸುವವರ ಬಗ್ಗೆ ಎಚ್ಚರ ವಹಿಸಬೇಕು. ಗಡಿ ಮೂಲಕ ಜಿಲ್ಲೆಯೊಳಗೆ ಬರುವ ಲಾರಿ, ಕಂಟೈನರ್, ಟೆಂಪೋ ಹಾಗೂ ಇತರೆ ಗೂಡ್ಸ್ ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಸಾರ್ವಜನಿಕವಾಗಿ ಎಲ್ಲೂ ಕೂಡ ಪ್ರಾಣಿ ವಧೆ ಮಾಡಬಾರದು. ಈ ಬಗ್ಗೆ ಸಾರ್ವಜನಿಕರಿಗೆ ಈಗಿನಿಂದಲೇ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಡಿವೈಎಸ್ ಪಿ.ರವಿಶಂಕರ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜನಾರ್ಧನ್, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರಾದ ರಾಧ, ಪೃಥ್ವಿರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..