ಹಾಸನ: ಕಾಂಗ್ರೆಸ್ (congress) ಸಂಸದ ಶ್ರೇಯಸ್ ಪಟೇಲ್ ಅವರನ್ನು ಹಾಡಿಹೊಗಳಿದ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ನೀಡಿರುವ ಹೇಳಿಕೆಗೆ ಜೆಡಿಎಸ್ (JDS) ಕಾರ್ಯಕರ್ತರು ಕೆರಳಿದ್ದು, ಮೈತ್ರಿ ಬೇಕಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಹೊಳೆನರಸೀಪುರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರೀತಂ ಗೌಡ, ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್‌ರನ್ನು ಹಾಡಿಹೊಗಳಿದ್ದಾರೆ.
2024ರ ನಂತರ ವಾಸ್ತು ದಿಕ್ಕು ದಿಸೆ ಎಲ್ಲಾ ಬದಲಾಗಿದೆ. ಅದರ ಶ್ರೇಯಸ್ಸು ಹಾಸನ ಸಂಸದ ಶ್ರೇಯಸ್ ಪಟೇಲ್‌ಗೆ ಸಲ್ಲುತ್ತದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು ಎಂದು ಹೇಳಿದ್ದಾರೆ.
ಈ ಭಾಗದಲ್ಲಿ ಇಷ್ಟುದಿನ ಒಂದು ಕಾರ್ಯಕ್ರಮ ನಡೆಯುತ್ತದೆ ಎಂದರೆ ಯಾವುದೋ ಒಂದು ಮನೆಗೆ, ಒಂದು ತೋಟದಲ್ಲಿ ಲೈಟ್ ಇರುತ್ತಿತ್ತು. ಆದರೆ ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನಾನು ನೋಡಿರಲಿಲ್ಲ. ಈಗ ಹೊಳೆನರಸೀಪುರ ಪಟೇಲ್‌ರ ತಾತನ ಕಾಲಕ್ಕೆ ಕೊಂಡೊಯ್ದಿದೆ. ಈ ಸಂದರ್ಭದಲ್ಲಿ ದಿವಂಗತ ಪುಟ್ಟಸ್ವಾಮಿ ಗೌಡರನ್ನು ಸ್ಮರಿಸುತ್ತೇನೆ ಎಂದು ಪ್ರೀತಂ ಹೇಳಿದರು.
ಶ್ರೇಯಸ್ ಪಟೇಲ್ ಬೇರೆ ಪಕ್ಷದಿಂದ ಹಾಸನ ಸಂಸದರಾಗಿದ್ದಾರೆ. ಮಾನವೀಯತೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡೋಣ. ಎಲ್ಲಿಯತನಕ ಶ್ರೇಯಸ್ ಪಟೇಲ್‌ಗೆ ಅಧಿಕಾರ ಕೊಡುತ್ತೀರೋ ಅಲ್ಲಿಯವರೆಗೆ ನಾನು ಇದೇ ರೀತಿ ಪ್ರತಿ ವರ್ಷ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ವಿಡಿಯೋ ಶೇರ್ ಮಾಡಿರುವ ಜೆಡಿಎಸ್ ಕಾರ್ಯಕರ್ತರು, ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ಆಪ್ತ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯ ಮಾತುಗಳು.! ಈ ಬಿಜೆಪಿ ಜೊತೆಗಿನ ಮೈತ್ರಿ ಬೇಕಾ.? ಎಂದು ಪ್ರಶ್ನಿಸಿದ್ದಾರೆ.