
ದೊಡ್ಡಬಳ್ಳಾಪುರದ: 2024- 25 ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದ ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆಯ (Nalanda High School) ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.

ನಳಂದ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಎರಡನೇ ರ್ಯಾಂಕ್ ಪಡೆದ ಅಮೃತ ಎಂ.ಎಸ್(624/625), ಮೂರನೇ ರ್ಯಾಂಕ್ ಪಡೆದ ಗಾನವಿ ಎಸ್.ಎಂ(623/625) ಹಾಗೂ ಎಂಟನೇ ರ್ಯಾಂಕ್ ಪಡೆದ ಚಾರಿತ್ಯ.ಎಚ್ (618/625) ಮತ್ತು ದಿವ್ಯಶ್ರೀ.ವಿ (618/625) ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಅನುರಾಧ ಕೆ.ಆರ್ ಮಾತನಾಡಿ, ನಮ್ಮ ಶಾಲೆಯ 07 ವಿದ್ಯಾರ್ಥಿಗಳು ರಾಜ್ಯಮಟ್ಟದ ಮೊದಲ 10 ರ್ಯಾಂಕ್ಗಳನ್ನು ಹಂಚಿಕೊಂಡಿದ್ದಾರೆ.
ಕೆಲವು ವಿದ್ಯಾರ್ಥಿಗಳು ಪುನರ್ ಮೌಲ್ಯಮಾಪನಕ್ಕೆ ಹಾಕಿಕೊಂಡಿದ್ದು ಮೊದಲ ರ್ಯಾಂಕ್ ಪಡೆಯುವ ನಿರೀಕ್ಷೆಯು ನಮ್ಮದಾಗಿದೆ. ನಮ್ಮ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದಿದ್ದಾರೆ.
ದಾಖಲೆ ಮಟ್ಟದಲ್ಲಿ ಸುಮಾರು 61 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದು ಅವರ ಪ್ರತಿಭೆ ಅನಾವರಣಗೊಂಡಿದೆ. ನಮ್ಮ ರ್ಯಾಂಕ್ ವಿಜೇತ ಮಕ್ಕಳ ಅಧ್ಯಯನಶೀಲತೆ, ನಡೆ – ನುಡಿಗಳು ಇತರ ವಿದ್ಯಾರ್ಥಿಗಳಿಗೂ ಆದರ್ಶ ಪ್ರಾಯವಾಗಿದೆ ಎಂದರು.
ಹಾಗೆಯೇ ಮುಂದುವರೆದು “ಇದಕ್ಕೆ ಕಾರಣರಾದ ನಮ್ಮ ಶಿಕ್ಷಕ ವೃಂದದವರು ಅತ್ಯಂತ ಪರಿಶ್ರಮದಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದರು.
ಇಡೀ ವರ್ಷ ವಿಶೇಷ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಅಧ್ಯಯನಶೀಲರನ್ನಾಗಿ ರೂಪಿಸಿದರು. ಹಾಗೆಯೇ ಪೋಷಕರು ಕೂಡ ಸಹಕರಿಸಿ ಈ ವರ್ಷದ ಉತ್ತಮ ಫಲಿತಾಂಶಕ್ಕೆ ಕಾರಣರಾದರು ಎಂದು ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳು ಇದೇ ರೀತಿ ಮುಂದೆಯೂ ಅಧ್ಯಯನಶೀಲರಾಗಿ ಸಮಾಜವನ್ನು ಉತ್ತಮವಾಗಿ ಮುನ್ನಡೆಸುವ ಹಾಗೂ ಸಮಾಜಕ್ಕೆ ಬೆಳಕನ್ನು ನೀಡುವ ವ್ಯಕ್ತಿಗಳಾಗಲಿ ಹಾಗೂ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ರವರು ಹಾರೈಸಿದರು.
ಇದನ್ನೂ ಓದಿ; SSLC ಫಲಿತಾಂಶ: ದೊಡ್ಡಬಳ್ಳಾಪುರದ ನಳಂದಾ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆಯ ವರದಿ ಇಲ್ಲಿದೆ
ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸುನೀತಾ ಪಿ, ಅನಿತಾ ಕೆ ಪಿ, ಎಲ್ಲಾ ಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


