ಬೆಂಗಳೂರು: ಭಾರತ-ಪಾಕಿಸ್ತಾನದ ಮಧ್ಯೆ ಏರ್ಪಟ್ಟ ಕದನ ವಿರಾಮ ಕುರಿತು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕು, ಪಹಲ್ಗಾಂ ದಾಳಿ ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ? ಎಂಬುದನ್ನು ಹೇಳಲಿ ಎಂದು ಆರ್‌ಡಿಪಿಆರ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಗ್ರಹಿಸಿದ್ದಾರೆ.
ಈ ಕುರಿತು ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ (R Ashoka), ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ನಿಮ್ಮ ಕಾಂಗ್ರೆಸ್ ಕಚೇರಿಯಲ್ಲಿ ಐಟಿ ಸೆಲ್ ನಡೆಸುತ್ತಿದ್ದರಾ ಸಚಿವ ಪ್ರಿಯಾಂಕ್ ಖರ್ಗೆ ಅವರೇ? ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದ ಉಗ್ರರು ತರಬೇತಿ ಪಡೆದ ಕೇಂದ್ರಗಳು, ಅಲ್ಲಿ ನೆಲೆಸಿದ್ದ ಅವರ 100ಕ್ಕೂ ಹೆಚ್ಚು ಜಿಹಾದಿ ಸಂಗಡಿಗರು, ಅವರ ತಲೆಗೆ ಮತಾಂಧತೆ ತುಂಬಿದ ಭಯೋತ್ಪಾದಕ ಸಂಘಟನೆಗಳ Most Wanted ನಾಯಕರು, ಅವರು ನಡೆಸುತ್ತಿದ್ದ ಮದರಸಾಗಳು, ಅಲ್ಲಿದ್ದ ಶಸ್ತ್ರಾಸ್ತ್ರ, ಸಂವಹನ ಉಪಕರಣಗಳು, ಅವರಿಗೆ ಬೆಂಬಲವಾಗಿ ನಿಂತಿದ್ದ ಪಾಕಿಸ್ತಾನದ ಸೇನಾ ವಾಯುನೆಲೆಗಳು, ಎಲ್ಲವನ್ನೂ ನಮ್ಮ ಸೇನಾಪಡೆಗಳು ನೆಲಸಮ ಮಾಡಿವೆ.
ಪಾಕಿಸ್ತಾನದ ಆಶ್ರಯದಲ್ಲಿದ್ದ ಉಗ್ರರ ಸಾಮ್ರಾಜ್ಯವೇ ಧೂಳೀಪಟ ಆಗಿರುವಾಗ ಇನ್ನು ಅಲ್ಲಿ ತಲೆ ಎತ್ತಿದ ಹುಳು-ಹುಪ್ಪಟೆಗಳು ಉಳಿಯುತ್ತವೆಯೇ? ಪಹಲ್ಗಾಮ್ ದಾಳಿ ನಡೆಸಿದ ಉಗ್ರರು ಒಂದು ವೇಳೆ ಇನ್ನೂ ಬದುಕಿದ್ದರೆ, ಅವರು, ಪ್ರಪಂಚದ ಯಾವ ಭೂಭಾಗದಲ್ಲಿ, ಪಾತಾಳದಲ್ಲಿ ಅಡಗಿದ್ದರೂ ನಮ್ಮ ಸೇನಾಪಡೆಗಳು, ರಕ್ಷಣಾ ಪಡೆಗಳು ಇಂದಲ್ಲ ನಾಳೆ ಹಿಡಿದೇ ಹಿಡಿಯುತ್ತಾರೆ.
ನಮ್ಮ ಸೇನಾಪಡೆಗಳ ಸಾಮರ್ಥ್ಯದ ಬಗ್ಗೆ ಇನ್ನೂ ಏನಾದರೂ ಅನುಮಾನ ಇದ್ದರೆ ದಯವಿಟ್ಟು ಒಮ್ಮೆ ಪಾಕಿಸ್ತಾನದ ವಾಯು ನೆಲೆಗಳಿಗೆ, ಉಗ್ರರ ಅಡಗುತಾಣಗಳಿಗೆ ಭೇಟಿ ಕೊಟ್ಟು ಬನ್ನಿ.
ರಾಷ್ಟ್ರೀಯ ಭದ್ರತೆ ವಿಚಾರ ನಮ್ಮ ಸೇನಾಪಡೆಗಳ ಬಿಡಿ. ಆದರೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ಎಲ್ಲಿದ್ದಾರೆ ಎಂದು ಮೊದಲು ಉತ್ತರಿಸಿ ಪುಣ್ಯ ಕಟ್ಟಿಕೊಳ್ಳಿ.
ಫೋರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಸಾಬೀತಾದರೂ ಆ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡರಲ್ಲ, ಬಹುಶಃ ಅವರು ನಿಮಗೆ ಬಹಳ ಬೇಕಾದವರು ಇರಬೇಕು.
ಅಂದು ಗೆದ್ದ ರಾಜ್ಯಸಭಾ ಸದಸ್ಯರು ತಮ್ಮ ತಂದೆ ಖರ್ಗೆ ಅವರ ಪರಮಾಪ್ತರು ಕೂಡ. ಆದ್ದರಿಂದ ಆ ದೇಶದ್ರೋಹಿಗಳು ಎಲ್ಲಿದ್ದಾರೆ ಎಂದು ಬಹುಶಃ ತಮಗೆ ಚೆನ್ನಾಗಿ ಗೊತ್ತಿರಲೇಬೇಕು. ಮೊದಲು ಆ ದೇಶದ್ರೋಹಿಗಳನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿ ಅವರನ್ನ ಜೈಲಿಗೆ ಅಟ್ಟಿ.
ರಾಷ್ಟ್ರೀಯ ಭದ್ರತೆ ವಿಚಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಸಂಸತ್ತಿನಲ್ಲಿ ನಿಮ್ಮ ಪಕ್ಷದ ದೊಡ್ಡ ದೊಡ್ಡ ನಾಯಕರು ಇದ್ದಾರೆ. ತಾವು ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದವರನ್ನ ಹುಡುಕಿ, ಅವರ ಹೆಡೆಮುರಿ ಕಟ್ಟಿ ಎಂದು ಹೇಳಿದ್ದಾರೆ.