ದೊಡ್ಡಬಳ್ಳಾಪುರ: ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಗಳಿಗೆ ಮೇ 25ರಂದು ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ನಿರ್ದೇಶಕ ಬಿಸಿ ಆನಂದ್ ಕುಮಾರ್ (BC Anand Kumar) ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಎಂಪಿಸಿಎಸ್ ಅಧ್ಯಕ್ಷರು, ಹಾಲು ಉತ್ಪಾದಕರು ಸೇರಿದಂತೆ ಅಪಾರ ಅಭಿಮಾನಿಗಳು, ಬೆಂಬಲಿಗರೊಂದಿಗೆ ದೊಡ್ಡಬಳ್ಳಾಪುರ ಶಿಬಿರ ಕಚೇರಿಯಿಂದ ಹೊರಟು, ಮಧ್ಯಾಹ್ನ ಸುಮಾರು 12 ಗಂಟೆಗೆ ಬೆಂಗಳೂರಿನ ಬಮೂಲ್ ಡೈರಿಯಲ್ಲಿ ಚುನಾವಣೆ ಅಧಿಕಾರಿಗೆ ಬಿಸಿ ಆನಂದ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಹಾಲು ಉತ್ಪಾದಕ ಸಂಘಗಳಿಗೆ ಹಾಗೂ ರೈತರಿಗಾಗಿ ನನ್ನ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ, ನನ್ನ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆಗೆ ತಾಲ್ಲೂಕಿನ ಹಾಲು ಉತ್ಪಾದಕ ರೈತರು ಆಶೀರ್ವದಿಸಿ ಮತ್ತೊಮ್ಮೆ ಅವರ ಸೇವೆ ಮಾಡಲು ಅವಕಾಶ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಇಂದಿನ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನನ್ನೊಂದಿಗೆ ಪ್ರಾಮಾಣಿಕ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಹಿರಿಯ ಮುಖಂಡರಾದ ತಿ.ರಂಗರಾಜು, ಬಿಜೆಪಿ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ನಾಗೇಶ್ ಮುಖಂಡರಾದ ಅಂಬರೀಶ್ ಮತ್ತಿತರರಿದ್ದರು.