ದೊಡ್ಡಬಳ್ಳಾಪುರ: ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಗಳಿಗೆ ಮೇ 25ರಂದು ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಮೂಲ್ ಮಾಜಿ ನಿರ್ದೇಶಕ ಬಿಸಿ ಆನಂದ್ ಕುಮಾರ್ (BC Anand Kumar) ಅವರು ಮತ್ತೆ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಈ ಕುರಿತಂತೆ ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, ಇಂದು (ಮೇ.16) ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.
ಮೇ 16ರಂದು ಬೆಳಗ್ಗೆ 9 ಗಂಟೆಗೆ ದೊಡ್ಡಬಳ್ಳಾಪುರ ಶಿಬಿರ ಕಚೇರಿಯಿಂದ ಹೊರಟು ಮಧ್ಯಾಹ್ನ ಸುಮಾರು 12 ಗಂಟೆಗೆ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಎಪಿಎಂಸಿ ಅಧ್ಯಕ್ಷರು, ಹಾಲು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.