ಬೆಂಗಳೂರು: ಅಧಿಕೃತ ರಸಗೊಬ್ಬರ ಮಾರಾಟದ ಪರವಾನಿಗೆ ಇಲ್ಲದೆ ರಸಗೊಬ್ಬರಗಳನ್ನು ದಾಸ್ತನು ಹಾಗೂ ಮಾರಾಟ ಮಾಡುವವರು ಮತ್ತು ಕಾಳಸಂತೆಯಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಉತ್ತರ ಸಹಾಯ ಕೃಷಿ ನಿರ್ದೇಶಕಿ ರೂಪ ವಿಎಂ (Roopa VM) ಅವರು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಮುಂಗಾರು ಹಂಗಾಮಿನ ರಸಗೊಬ್ಬರ ಮಾರಾಟಗಾರರು, ವಿತರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸಗೊಬ್ಬರ ದಾಸ್ತಾನು ಮತ್ತು ಗರಿಷ್ಟ ಮಾರಾಟ (ಎಂ.ಆರ್.ಪಿ) ದರಗಳ ವಿವರಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರಮುಖವಾದ ಸ್ಥಳದಲ್ಲಿ ಪ್ರದರ್ಶಿಸಬೇಕು. ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇತರೆ ಸಂಯುಕ್ತ ರಸಗೊಬ್ಬರ ಬಳಕೆ ಹಾಗೂ ಸಾವಯುವ ಗೊಬ್ಬರಗಳನ್ನು ಬಳಕೆ ಮಾಡುವಂತೆ ರೈತರಿಗೆ ಹೆಚ್ಚಿನ ಅರಿವು ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೊತೆಗೆ ಗರಿಷ್ಟ ಮಾರಾಟ ದರಗಳಿಗಿಂತ ಹೆಚ್ಚಿನ ಬೆಲೆಗೆ ಯಾವುದೇ ರಸಗೊಬ್ಬರಗಳನ್ನು ಮಾರಾಟ ಮಾಡಿದರೇ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಟ್ಟುನಿಟ್ಟಾಗಿ ಸೂಚಿಸಿದರು.
ಇಫ್ಕೋ ಸಂಸ್ಥೆಯ ಪ್ರತಿನಿಧಿ ಚೇತನ್ ಮಾತನಾಡಿ, ಬೆಳೆ ಆಧಾರಿತ ರಸಗೊಬ್ಬರ ಬಳಕೆ, ನ್ಯಾನೋ ಡಿಎಪಿ, ನ್ಯಾನೋ ಯೂರಿಯ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಹಾಗೂ ರೈತರು ತಮ್ಮ ಬೆಳೆಗಳಿಗೆ ಡಿಎಪಿ ಗೊಬ್ಬರಕ್ಕೆ ಅವಲಂಬಿತವಾಗದೆ, ಸಂಯಕ್ತ ರಸಗೊಬ್ಬರ ಬಳಕೆಯಿಂದ, ಬೆಳೆಗಳ ಪೋಷಕಾಂಶಗಳನ್ನು ಕಾಯ್ದುಕೊಂಡು ಹೆಚ್ಚಿನ ಇಳುವರಿ ಪಡೆಯಬಹುದೆಂದರು.
ಈ ತಾಂತ್ರಿಕ ಅಧಿಕಾರಿ ಅರುಣಾ, ಕೃಷಿ ಅಧಿಕಾರಿ ಜ್ಯೋತಿ, ತಾಲೂಕು ವ್ಯವಸ್ಥಾಪಕ ನವೀನ್ ಮತ್ತಿತರರಿದ್ದರು.