ದೊಡ್ಡಬಳ್ಳಾಪುರ: ತಾಲೂಕಿನ ಮಾಕಳಿ (Makali) ಗ್ರಾಮದಲ್ಲಿ ರಸ್ತೆಯಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿ ಮಾಕಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು ಅಧಿಕಾರಿಗಳು ಸ್ಪಂದಿಸದ ಕಾರಣ, ಗ್ರಾಮಸ್ಥರು ತ್ಯಾಜ್ಯ ನೀರು ಹರಿದು ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿಯೇ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ವ್ಯಾಪ್ತಿಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮನೆಗಳಿದ್ದು, ಮಾಕಳಿಯಿಂದ ವಾಬಸಂಧ್ರಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದೆ. ಇಲ್ಲಿನ ಅವ್ಯವಸ್ಥೆಗೆ ಗ್ರಾಮಸ್ಥರು ಬೇಸತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಗ್ರಾಮಸ್ಥರಾದ ಜಯರಾಮ್ ಅವರು ಮಾತನಾಡಿ, ಗ್ರಾಮದಲ್ಲಿ ಅವ್ಯವಸ್ಥೆಗೆ ಕಾರಣವಾಗುತ್ತಿರುವ ಜಾಗದಲ್ಲಿ ಚರಂಡಿ ನಿರ್ಮಿಸುವಂತೆ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದಾಗ್ಯೂ ಅಧಿಕಾರಿಗಳು ಸ್ಪಂದಿಸದೆ ಗ್ರಾಮಸ್ಥರು ಕೆಸರಿನಲ್ಲಿ ಓಡಾಡುವಂತಾಗಿದೆ.
ಕೂಡಲೇ ಅಧಿಕಾರಿಗಳು ಹೆಚ್ಚೆತ್ತು ಚರಂಡಿ ಕಾಮಗಾರಿ ನಡೆಸಿ, ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುವುದನ್ನು ತಪ್ಪಿಸಬೇಕಿದೆ, ಇಲ್ಲವಾದಲ್ಲಿ ಹೊಸಹಳ್ಳಿ ಗ್ರಾಮಪಂಚಾಯಿತಿ ಬಳಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.