ದೊಡ್ಡಬಳ್ಳಾಪುರ: ಮುತ್ತೂರಿನಲ್ಲಿ (Muttur) ಶುಕ್ರವಾರ ಸಂಜೆ ಗಣೇಶ ವಿಸರ್ಜನೆ ವೇಳೆ ನಡೆದ ಪಟಾಕಿ ದುರಂತದಲ್ಲಿ ಬಾಲಕ ಮೃತಪಟ್ಟು, ಮತ್ತೋರ್ವ ಜೀವನ್ಮರಣದ ಹೋರಾಟ ಘಟನೆಗೆ ಸಂಬಂಧಿಸಿದಂತೆ ಮೂರ್ತಿ ಪ್ರತಿಷ್ಠಾಪಿಸಿದ್ದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಆಯೋಜಕರಲ್ಲಿ ಮೂವರನ್ನು ದೊಡ್ಡಬಳ್ಳಾಪುರ ನಗರಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಉಳಿದಂತೆ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪೊಲೀಸ್ ಕಾನ್‌ಸ್ಟೇಬಲ್ ಪಟಾಕಿ ಸ್ಫೋಟದಲ್ಲಿ ಜಾಕಿರ್ ಹುಸೇನ್ ಅವರ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಟಾಕಿ ಸಿಡಿದು ಅವರ ರಟ್ಟೆಯ ಮಾಂಸಖಂಡಗಳು ಕಿತ್ತುಕೊಂಡು ಹೋಗಿ, ಬರೀ ಮೂಳೆ ಉಳಿದಿತ್ತು.
ಗಂಭೀರವಾಗಿ ಗಾಯಗೊಂಡಿರುವ ಯೋಗೇಶ್ ಎಂಬಾತನಿಗೆ ಚಿಕಿತ್ಸೆ ಮುಂದುವರೆದಿದೆ. ಈತನ ದೇಹದ ಬಹುಭಾಗ ಪಟಾಕಿ ಸ್ಫೋಟದಲ್ಲಿ ಸುಟ್ಟು ಹೋಗಿದೆ.
ಉಳಿದ ಐದು ಜನರ ಆರೋಗ್ಯ ಸುಧಾರಿಸಿದೆ ಎಂದು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ತಿಳಿಸಿದ್ದಾರೆ.