
ಮೈಲಾಡುತುರೈ: ಸಾರ್ವಜನಿಕ ಸಭೆಯೊಂದರಲ್ಲಿ ಡಿಎಂಕೆ (DMK) ಸಂಸದ ಎ ರಾಜಾ (A Raja) ಅವರು ಮಾತನಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಿಂದ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜನ್ಮದಿನ ಮತ್ತು ರಾಜ್ಯಪಾಲರ ವಿಷಯದಲ್ಲಿ ಪಕ್ಷದ ಕಾನೂನು ವಿಜಯವನ್ನು ಆಚರಿಸಲು ಡಿಎಂಕೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ಎ ರಾಜಾ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ ಕಾರಣ ವೇದಿಕೆಯ ಮುಂಭಾಗ ಅಳವಡಿಸಿದ್ದ ಫೋಕಸ್ ಲೈಟ್ ಕಂಬ ಕುಸಿದು ಡಯಾಜ್ ಮೇಲೆ ಬಿದ್ದಿದೆ.
ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಉಕ್ಕಿನ ರಾಡ್‌ನಲ್ಲಿ ಅಳವಡಿಸಲಾದ ಕಂಬವು ಮೈಕ್ರೊಫೋನ್‌ಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮೊದಲು ಅವರು ವೇದಿಕೆಯಿಂದ ದೂರ ಸರಿಯುವುದನ್ನು ಕಾಣಬಹುದಾಗಿದ್ದು, ಅವರು ಗಮನಿಸಿದೆ ಭಾಷಣ ಮುಂದುವರಿಸಿದ್ದಲ್ಲಿ ತೀವ್ರವಾಗಿ ಗಾಯಗೊಳ್ಳುವ ಸಾಧ್ಯತೆ ಇತ್ತು.


