ಬೆಂಗಳೂರು: ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಅಗ್ನಿವೀರರ ನೇಮಕಾತಿಗೆ (Recruitment of Agniveer) ಕರ್ನಾಟಕದಿಂದ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳಿಗೆ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ.
ಇದೇ ಜೂನ್ 30ರಿಂದ ಜುಲೈ 10ರವರೆಗೆ ಈ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳು ಈಗಾಗಲೇ ಭಾರತೀಯ ಸೇನೆಯ ಅಧಿಕೃತ ವೆಬ್ ಪೋರ್ಟಲ್‌ನಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಅಗ್ನಿವೀರ್ ಹುದ್ದೆಗಳಿಗೆ ರ್ಯಾಲಿಗಳ ಮೂಲಕ ಭರ್ತಿ ಮಾಡಲಾಗುತ್ತಿತ್ತು. ಇದೀಗ ಹೊಸ ಮಾದರಿಯಲ್ಲಿ ಸಾಮಾನ್ಯ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುತ್ತಿದ್ದು, ಸಾಮಾನ್ಯ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಗಣಿತ ಮತ್ತು ಲಾಜಿಕಲ್ ರಿಸನಿಂಗ್ ಕುರಿತು ಪ್ರಶ್ನೆಗಳಿರಲಿವೆ. ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ನಡೆಯಲಿದೆ.
ಅಭ್ಯರ್ಥಿಗಳಿಗೆ ಸೂಚನೆಗಳು
ಪರೀಕ್ಷೆ ನಡೆಯುವ ದಿನಾಂಕವನ್ನು ಆಧರಿಸಿ www. joinindianarmy.nic.in ವೆಬ್‌ಸೈಟ್‌ನಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.
ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಬೇಕು. ಮೂಲ ಪ್ರವೇಶ ಪತ್ರವನ್ನು ಕೊಂಡೊಯ್ಯುವುದು ಅವಶ್ಯ. ಆಧಾರ್ ಕಾರ್ಡ್ ಮೂಲ ಪ್ರತಿಯನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಕಡ್ಡಾಯ.