ಶಿರಹಟ್ಟಿ: ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಬಿಜೆಪಿ ( BJP) ಶಾಸಕ ಶಾಸಕ ಚಂದ್ರು ಲಮಾಣಿ (Chandru Lamani) ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ.
ಲಂಚ ಸ್ವೀಕರಿಸುವಾಗಲೇ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.
ಐದು ಲಕ್ಷ ರೂಪಾಯಿಯನ್ನು ಗುತ್ತಿಗೆದಾರನಿಂದ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.
ರಸ್ತೆಯೊಂದರ ತಡೆಗೋಡೆ ನಿರ್ಮಾಣದ ಕಾಮಗಾರಿಗಾಗಿ ಚಂದ್ರು ಲಮಾಣಿ 11 ಲಕ್ಷ ರೂಪಾಯಿ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರಂತೆ. ಮುಂಗಡವಾಗಿ ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲಕ್ಷೇಶ್ವರ ಪಟ್ಟಣದಲ್ಲಿ ಚಂದ್ರು ಲಮಾಣಿ ಅವರಿಗೆ ಸೇರಿದ ಆಸ್ಪತ್ರೆಯಲ್ಲಿ ಗುತ್ತಿಗೆದಾರ ವಿಜಯ್ ಪೂಜಾರ ಎಂಬುವರಿಂದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆಯಲ್ಲಿ ಸರ್ಕಾರ ತೊಡಗಿದೆ ಎಂದು ಆರೋಪಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ತನ್ನದೇ ಪಕ್ಷದ ಶಾಸಕ ಚಂದ್ರು ಲಮಾಣಿಯ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಪ್ರಕರಣದಿಂದ ತೀವ್ರ ಮುಜುಗರವುಂಟು ಮಾಡಿದೆ.