ದೊಡ್ಡಬಳ್ಳಾಪುರ: ಭಕ್ತನೋರ್ವ ಬಾಳೆಹಣ್ಣಿನ ಮೇಲೆ ಈ ಸಲ ಕಪ್ ನಮ್ದೆ, ಜೈ ಆರ್ಸಿಬಿ ಎಂದು ಬರೆದು, ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದಲ್ಲಿ ದೇವರಿಗೆ ಹರಕೆ ಹೊತ್ತು ಅರ್ಪಿಸಿರುವ ಘಟನೆ ನಡೆದಿದೆ.
ತಾಲೂಕಿನ ಇತಿಹಾಸ ಪ್ರಸಿದ್ದವಾದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದ ನಗರದ ತೇರಿನ ಬೀದಿಯಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವದ ವೇಳೆ ಭಕ್ತರು ಬಾಳೆ ಹಣ್ಣು ದವನ ಅರ್ಪಿಸಿ ಭಕ್ತಿ ಅರ್ಪಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿ ಯೋರ್ವ ಈ ಸಲ ಕಪ್ ನಮ್ದೆ , ಜೈ ಆರ್ಸಿಬಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆಯುವ ಮೂಲಕ ಹರಕೆ ಹೊತ್ತಿದ್ದಾನೆ.
ವೇಣುಕುಮಾರ್ ಎಂಬ ಯುವಕ ಈ ಹರಕೆ ಹೊತ್ತಿದ್ದು, RCB ತಂಡ ಈ ಸಲ ಕಪ್ ಗೆಲ್ಲಲಿದೆ. ದೇವರ ಮೇಲಿನ ನಂಬಿಕೆಯಿಂದ ಈ ಸಲ ಕಪ್ ನಮ್ದೆ, ಜೈ ಆರ್ಸಿಬಿ ಎಂದು ಬರೆದು ಹರಕೆ ಹೊತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನೂ ಬಿಸಿಸಿಐ ಸಿದ್ಧಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.
ತಾತ್ಕಾಲಿಕ ವೇಳಾಪಟ್ಟಿ ಅನ್ವಯ ಏ.11ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮಾ.28ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಐಪಿಎಲ್ ಆರಂಭಕ್ಕೂ ಮುನ್ನ ಆಟಗಾರರಿಗೆ 2 ವಾರಗಳ ವಿಶ್ರಾಂತಿ ಸಿಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 14ನೇ ಆವೃತ್ತಿಯ ಫೈನಲ್ ಪಂದ್ಯ ಜೂನ್ 5 ಇಲ್ಲವೇ 6ರಂದು ನಡೆಯಲಿದೆ ಎನ್ನಲಾಗಿದೆ.
ಈ ಎಲ್ಲಾ ಪ್ರಕ್ರಿಯೆ ನಡುವೆಯೇ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್ಸಿಬಿ ಗೆಲ್ಲಬೇಕೆಂದು ಅಭಿಮಾನಿಗಳು ಹರಕೆ ಹೊರಲಾರಂಭಿಸಿದ್ದಾರೆ.
14ನೇ ಸರಣಿಯವರೆಗೂ ಒಂದು ಸಲವೂ ಸಹ ಕಪ್ ಗೆಲ್ಲದಿದ್ದರೂ, ಆರ್ಸಿಬಿ ತಂಡದ ಪರ ಇರುವ ಅಭಿಮಾನಿಗಳಲ್ಲಿನ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ.ಸುದ್ದಿಗಳು ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….