
ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿರುವ ಎಲ್ಲಾ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿನ ಮನೆ-ಮನೆಗೆ ತೆರಳಿ, ವಿಂಗಡಣೆ ಮಾಡಿರುವ ಕಸ ಸಂಗ್ರಹಣೆ ಮಾಡಬೇಕು ಹಾಗೂ ತ್ಯಾಜ್ಯ ಸಂಗ್ರಹಣೆಗೆ ನಿರ್ದಿಷ್ಟ ಶುಲ್ಕ ವಿಧಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಸಭೆ ಹಾಗೂ ಪುರಸಭೆಗಳು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪೀಠ ನೀಡಿರುವ ಎಲ್ಲಾ ಆದೇಶಗಳನ್ನು ತಪ್ಪದೇ ಪಾಲಿಸುವ ಕುರಿತು ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದು ಸೇರಿದಂತೆ ಕರಪತ್ರಗಳನ್ನು ಹಂಚುವ ಮೂಲಕ ಕಸವಿಂಗಡಣೆ ಹಾಗೂ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಈಗಾಗಲೇ ಜಮೀನು ಮಂಜೂರು ಮಾಡಲಾಗಿದ್ದು, ಸರ್ವೇ ಮಾಡಿಸಿ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದರು. ಅಲ್ಲದೆ, ಕೆಲವು ಕಡೆ ರೈತರು ಜಮೀನು ನೀಡಲು ನಿರಾಕರಿಸಿದ ಘಟನೆಗಳು ನಡೆದಿದ್ದು, ಅಂತಹ ಸಂದರ್ಭದಲ್ಲಿ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಸ್ಥಳೀಯ ಸಂಸ್ಥೆಗಳು ಗೊಬ್ಬರ ಉತ್ಪಾದನೆ ಮಾಡುತ್ತಿದ್ದು, ಕೃಷಿ ಇಲಾಖೆ ಸಹಯೋಗದೊಂದಿಗೆ ಪರೀಕ್ಷೆ ನಡೆಸಿ, ದರ ನಿಗದಿಪಡಿಸುವ ಮೂಲಕ ರೈತರಿಗೆ ಮಾರಾಟ ಮಾಡಬೇಕು ಹಾಗೂ ಇದರ ಕುರಿತು ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಸ ಸಂಗ್ರಹಣೆ ಮಾಡುವ ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್. ತಂತ್ರಜ್ಞಾನ ಅಳವಡಿಸಬೇಕು ಹಾಗೂ ವಿಲೇವಾರಿ ಸಂದರ್ಭದಲ್ಲಿ ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ಹರಾಜು ಪ್ರಕ್ರಿಯೆ ನಡೆಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದರೊಂದಿಗೆ ನಗರ ವ್ಯಾಪ್ತಿಯಲ್ಲಿ ಹೊಸ ಮನೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಹಳೆಯ ಮನೆಗಳನ್ನು ನೆಲಸಮ ಮಾಡುವ ಸಂದರ್ಭದಲ್ಲಿ ಕಟ್ಟಡ ಸಾಮಗ್ರಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ ಅವರು ಮಾತನಾಡಿ, ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಪ್ರತಿದಿನ 8 ಟನ್ ಹಸಿಕಸ ಸಂಗ್ರಹಣೆಯಾಗುತ್ತಿದ್ದು, ಪ್ರತಿದಿನ 4 ಟನ್ ಗೊಬ್ಬರ ತಯಾರಾಗುತ್ತಿದೆ, ಪ್ರತಿ ಟನ್‍ಗೆ 1 ಸಾವಿರ ರೂಪಾಯಿ ನಿಗದಿ ಪಡಿಸಲಾಗಿದ್ದು, ಪ್ರತಿ ತಿಂಗಳು 15 ಟನ್ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಹಾಗೂ ದಾಸ್ತಾನಿನಲ್ಲಿ 144 ಟನ್ ಗೊಬ್ಬರ ಶೇಖರಿಸಲಾಗಿದ್ದು , ರೈತರಿಗೆ ಈ ದರದಲ್ಲೇ ಮಾರಾಟ ಮಾಡಲಾಗುತ್ತಿದೆ ಎಂದರು.
ಹೊಸಕೋಟೆ ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ 7 ಟನ್ ಹಸಿ ಕಸ ಸಂಗ್ರಹವಾಗುತ್ತಿದ್ದು, ಗೊಬ್ಬರವನ್ನು ನೇರವಾಗಿ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ನೆಲಮಂಗಲ ನಗರಸಭೆಯಲ್ಲಿ ಪ್ರತಿದಿನ 3 ಟನ್ ಹಸಿಕಸ ಸಂಗ್ರಹವಾಗುತ್ತಿದ್ದು, ಪ್ರತಿದಿನ ಒಂದು ಟನ್ ಗೊಬ್ಬರ ತಯಾರಾಗುತ್ತಿದೆ ಹಾಗೂ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ದೇವನಹಳ್ಳಿ ಪುರಸಭೆಯಲ್ಲಿ ಪ್ರತಿದಿನ 2 ಟನ್ ಹಸಿಕಸ ಸಂಗ್ರಹವಾಗುತ್ತಿದ್ದು, ದಿನವೊಂದಕ್ಕೆ 0.5 ಟನ್ ಗೊಬ್ಬರ ತಯಾರಾಗುತ್ತಿದೆ. ಪ್ರತಿ ಟನ್‍ಗೆ ಐದು ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ, ಪ್ರತಿ ತಿಂಗಳು ಒಂದು ಟನ್ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಹಾಗೂ ವಿಜಯಪುರ ಪುರಸಭೆಯಲ್ಲಿ ಪ್ರತಿದಿನ ಒಂದು ಟನ್ ಹಸಿ ಕಸ ಸಂಗ್ರಹವಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ, ನಗರಸಭೆ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

