
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಯಲಿಯೂರು, ದೇವನಹಳ್ಳಿ ತಾಲ್ಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 05ರಂದು ದೇವನಹಳ್ಳಿ ತಾಲ್ಲೂಕಿನ ಯಲಿಯೂರಿನ ಪಶುಚಿಕಿತ್ಸಾಲಯ ಆವರಣದಲ್ಲಿ “ಜಿಲ್ಲಾ ಮಟ್ಟದ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೋಪಾಲಕರು ಮಾತ್ರ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಮಾರ್ಚ್ 04ರ ಮಧ್ಯಾಹ್ನ 12 ಗಂಟೆಯೊಳಗೆ ಕಿವಿ ಓಲೆ ಅಳವಡಿಸಿದ ತಮ್ಮ ಹಸುಗಳೊಂದಿಗೆ ಆಗಮಿಸಿ ರೂ.100/- ಗಳ ನೋಂದಣಿ ಶುಲ್ಕವನ್ನು ಪಾವತಿಸಿ, ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹೆಸರನ್ನು ನೋಂದಾಯಿಸ ಕೊಳ್ಳಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಗೋಪಾಲಕರು ಆಧಾರ್ ಕಾರ್ಡ್ ಪ್ರತಿ ಮತ್ತು ಇತ್ತೀಚಿನ ಭಾವಚಿತ್ರ(ಫೋಟೋ)ವನ್ನು ನೋಂದಣಿ ಸಮಯದಲ್ಲಿ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಕಾಲುಬಾಯಿ ರೋಗದ ಲಸಿಕೆ ಹಾಕಿಸಿರುವ ಬಗ್ಗೆ ಸ್ಥಳೀಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಂದ ಪಡೆದ ದೃಡೀಕರಣ ಪತ್ರವನ್ನು ಸಲ್ಲಿಸಬೇಕು. ದಿನಕ್ಕೆ ಕನಿಷ್ಠ 20 ಲೀಟರ್ ಹಾಲು ಕರೆಯುವ ಸಾಮರ್ಥ್ಯವುಳ್ಳ ಹಸುಗಳನ್ನು ಮಾತ್ರ ಸ್ಪರ್ಧೆಗೆ ಕರೆತರಬೇಕು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿರುವ ಹಸುವಿನ ಮಾಲೀಕರು ಹಾಗೂ ಹಾಲು ಕರೆಯುವ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರಿಗೂ ಸಹ ಹಾಲು ಕರೆಯುವ ಪ್ರದೇಶಕ್ಕೆ ಪ್ರವೇಶವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಹಸುಗಳಿಂದ ಮಾರ್ಚ್ 05 ರಂದು ಬೆಳಗ್ಗೆ 6.30 ಹಾಗೂ ಸಂಜೆ 5.30 ಕ್ಕೆ ತೀರ್ಪುಗಾರರ ಸಮ್ಮುಖದಲ್ಲಿ ಹಿಂಡಿದ ಹಾಲಿನ ಪ್ರಮಾಣವನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪರ್ಧೆಯಲ್ಲಿ ಹಾಲು ಹಿಂಡಲು ಬೆಳಗ್ಗೆ 20 ನಿಮಿಷ ಮತ್ತು ಸಂಜೆ 20 ನಿಮಿಷಗಳ ಕಾಲಾವಕಾಶ ಮಾತ್ರ ನೀಡಲಾಗುವುದು. ಮಾರ್ಚ್ 5ರ ಬೆಳಗ್ಗೆ ಮತ್ತು ಸಂಜೆ ಕರೆದ ಹಾಲಿನ ಇಳುವರಿಯಲ್ಲಿ 5 ಕಿಲೋಗಿಂತ ಹೆಚ್ಚಿನ ವ್ಯತ್ಯಾಸವಿದ್ದಲ್ಲಿ ಅಂತಹ ಹಸುಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಹಸುಗಳ ಮಾಲೀಕರು ಮಾತ್ರ ಸ್ಪರ್ಧೆಯ ಆಯೋಜಕರ ಜೊತೆ ಸ್ಪರ್ಧೆಯ ವಿಷಯವಾಗಿ ಚರ್ಚಿಸಬಹುದು, ಉಳಿದವರಿಗೆ ಅವಕಾಶವಿಲ್ಲ. ಹಾಲು ಕರೆಯುವ ಮುನ್ನ ಖಾಲಿ ಬಕೆಟ್‌ಗಳನ್ನು ತೀರ್ಪುಗಾರರಿಗೆ ಹಾಗೂ ಅಲ್ಲಿ ನೆರೆದಿರುವ ಎಲ್ಲರಿಗೂ ತೋರಿಸತಕ್ಕದ್ದು. ಸ್ಪರ್ಧೆಯ ಫಲಿತಾಂಶದ ಬಗ್ಗೆ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿಜೇತ ಹಸುಗಳ ಮಾಲೀಕರಿಗೆ ಬಹುಮಾನಗಳನ್ನು ಮಾರ್ಚ್ 6 ರಂದು ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಹಸುಗಳಿಗೆ ಮೇವು, ನೀರು, ತಾತ್ಕಾಲಿಕ ಕೊಟ್ಟಿಗೆ ವ್ಯವಸ್ಥೆ, ಹಸುವಿನ ಮಾಲೀಕರು ಹಾಗೂ ಹಾಲು ಕರೆಯುವವರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಹಾಗೂ ಪಶುವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ದೇವನಹಳ್ಳಿಯ ಡಾ.ವಿಶ್ವನಾಥ್ ಮೊ.ಸಂ.: 9900213430, ಡಾ.ನಾರಾಯಣಸ್ವಾಮಿ ಮೊ.ಸಂ.: 9591444951, ಡಾ.ಮಂಜುನಾಥ್ 9480687978, ದೊಡ್ಡಬಳ್ಳಾಪುರದ ಡಾ.ಆಂಜಿನಪ್ಪ, ಮೊ.ಸಂ.: 9632047920, ನೆಲಮಂಗಲದ ಡಾ.ಸಿದ್ದಪ್ಪ 9845637387, ಡಾ.ಎಲ್.ಕೆ. ಜಯರಾಮಯ್ಯ ಮೊ.ಸಂ.: 9972743662, ಹೊಸಕೋಟೆಯ ಡಾ.ಎಂ.ಕೆ. ಮಂಜುನಾಥ ಮೊ.ಸಂ.: 9448988649, ಡಾ.ಸರ್ವೇಶ್ 997220171 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

