
ಬೆಂ.ಗ್ರಾ.ಜಿಲ್ಲೆ: ಕೊಳವೆ ಬಾವಿಯಿಂದ ಕೃಷಿಯೇತರ(ವಾಣಿಜ್ಯ) ಚಟುವಟಿಕೆಗಳಿಗಾಗಿ ಟ್ಯಾಂಕರ್ ಮೂಲಕ ನೀರನ್ನು ಬಳಸುವವರು ಕಡ್ಡಾಯವಾಗಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಂಡು, ನಿರಾಕ್ಷೇಪಣಾ ಪತ್ರವನ್ನು ಪಡೆಯುಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ “ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂತರ್ಜಲ ಪ್ರಾಧಿಕಾರದಿಂದ ನೋಂದಣಿ ಮಾಡಿಸದೆ, ನಿರಾಕ್ಷೇಪಣಾ ಪತ್ರ ಪಡೆಯದೆ ಅಂತರ್ಜಲ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾದ್ಯಂತ ಸಫಲ ಮತ್ತು ವಿಫಲ ಕೊಳವೆ ಬಾವಿಗಳ ತ್ರೈಮಾಸಿಕ (ಜನವರಿ 2020 -ಮಾರ್ಚ್ 2021ರ ಅಂತ್ಯಕ್ಕೆ) ವರದಿ ನೀಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಅವರು, ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಲು ಇಚ್ಛಿಸುವ ಅರ್ಜಿದಾರರ ಜಮೀನಿನಿಂದ 250 ರಿಂದ 500 ಮೀಟರ್ ಅಂತರದಲ್ಲಿ ಯಾವುದೇ ಸರ್ಕಾರಿ ಕುಡಿಯುವ ನೀರಿನ ಕೊಳವೆ ಬಾವಿ ಇಲ್ಲದಿರುವ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿ ವತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಹೇಳಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(MSME)ದವರು ಹೊರತುಪಡಿಸಿ, ಉಳಿದ ಎಲ್ಲಾ ಕೈಗಾರಿಕೆಗಳು ಅಂತರ್ಜಲ ಬಳಸಿದ್ದಲ್ಲಿ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (NGT) ನಿರ್ದೇಶನದಂತೆ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಕಿಲೋ ಲೀಟರ್ ಪರ್ ಡೇ(KLD) ನೀರನ್ನು ಬಳಕೆ ಮಾಡುತ್ತಿರುವ ಕೈಗಾರಿಕೆಗಳಿಗೆ ನಿರಾಕ್ಷೇಪಣಾ ಪತ್ರವನ್ನು ನೀಡುವ ಸಂದರ್ಭದಲ್ಲಿ ದುಸ್ಥಿತಿಯಲ್ಲಿರುವ ಕೆರೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ತಿಳಿಸಿ ಎಂದರಲ್ಲದೆ, ಸರ್ಕಾರಿ ಹಾಸ್ಟೆಲ್ ಮತ್ತು ಶಾಲೆಗಳಲ್ಲಿ ಶೌಚಾಲಯಗಳ ದುರಸ್ಥಿ, ಸೋಲಾರ್ ಅಳವಡಿಸಿಕೊಡಲು ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ತಿಳಿಸಿ, ನಿರಾಕ್ಷೇಪಣಾ ಪತ್ರ ನೀಡಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಹಿರಿಯ ಭೂ ವಿಜ್ಞಾನಿ ಪಲ್ಲವಿ, ಭೂ ವಿಜ್ಞಾನಿ ವೆಂಕಟೇಶ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಭೀಮ್ ಸಿಂಗ್ ಗೋಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

