
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳು ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಸಮಸ್ಯೆ ಎದುರಾಗುವ ಮುನ್ನವೇ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಬೆಂಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ಕೆ.ಸಿ. ಜನರಲ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ “ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ರಕ್ತಹೀನತೆ ಹಾಗೂ ಅಪಘಾತದಲ್ಲಿ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ. ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ರೋಗಿಗಳ ಪ್ರಾಣ ಉಳಿಸುವಂತಹ ಕಾರ್ಯ ಮಾಡಬೇಕು ಎಂದು ರಕ್ತದಾನ ಮಾಡಲು ಪ್ರೇರೇಪಿಸಿದರು.
2017ರಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು, ಅದೇ ರೀತಿ ಇಂದು ಸಹ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ಮಾಡಿರುವುದೇ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮಾತನಾಡಿ, ಕೋವಿಡ್ ಕಾರಣದಿಂದಾಗಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಾರಣ ಎಲ್ಲರಿಗೂ ಅನುಕೂಲವಾಗಲೆಂದು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ರೋಗಿಗಳ ಪ್ರಾಣವನ್ನು ಕಾಪಾಡುವ ಹಾಗೂ ಆರೋಗ್ಯದ ಜಾಗೃತಿ ಮೂಡಿಸುವ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಂಜುಳಾದೇವಿ ಅವರು ಮಾತನಾಡಿ, ಬಹುತೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಹೆರಿಗೆ ಸಂದರ್ಭದಲ್ಲಿ ರಕ್ತಹೀನತೆ ಹಾಗೂ ರಕ್ತಸ್ರಾವದಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕೆ.ಸಿ ಜನರಲ್ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಡಾ.ಶಾಂತಾ ಹೊಸಮನಿ ಅವರು ರಕ್ತದಾನ ಮಾಡುವುದರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರೋಗ್ಯ ಅರಿವು ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಜಿಲ್ಲಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾ ಕ್ಷಯಾ ರೋಗ ನಿಯಂತ್ರಣ ಘಟಕದ ಸಂಚಾಲಕಿ ಡಾ.ಶಕೀಲಾ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಚಾಲಕಿ ಡಾ.ಶಾಂತಲಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

