
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ – ದಾಬಸ್ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಆರಂಭವಾಗಿದ್ದು, ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕಟ್ಟಡ ಖಾಲಿ ಮಾಡಲು ಸಮಯಾವಕಾಶ ಕೇಳಲು ರಸ್ತೆ ಯೋಜನಾಧಿಕಾರಿಗಳಿಗೆ ಮನವಿ ಮಾಡಲು ದೊಡ್ಡಬೆಳವಂಗಲದಲ್ಲಿ ಸಭೆ ಸೇರಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಶಾಸಕ ವೆಂಕಟರಮಣಯ್ಯ, ಕಾನೂನಿಗೆ ಎಲ್ಲರೂ ತಲೆ ಬಾಗಲೇ ಬೇಕು. ನಾವು ರಸ್ತೆ ಮಾಡಲು ಯಾವುದೇ ರೀತಿಯಲ್ಲಿ ಅಡ್ಡಿ ಮಾಡುವುದಿಲ್ಲ. ಇದು ಹೋಬಳಿ ಮುಖ್ಯ ಕೇಂದ್ರ ಆದ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸ್ಥಳೀಯ ಜನರು ಇಲ್ಲಿ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳು ಜನರು ಬೇರೆ ಜಾಗ ಮಾಡಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ರಾಷ್ಟ್ರೀಯ ರಸ್ತೆ ಯೋಜನಾಧಿಕಾರಿ ಸೋಮಶೇಖರ್, ಈ ಯೋಜನೆ ಬಹಳ ವರ್ಷಗಳ ಹಿಂದೆಯೇ ಕಾಮಗಾರಿ ಮುಗಿಯಬೇಕಿತ್ತು. ರಸ್ತೆ ಅಗಲೀಕರಣದಿಂದ ಸ್ವಲ್ಪ ತೊಂದರೆ ಆಗಿದೆ. ಕಾಮಗಾರಿಗಳು ಬೇಗ ಮುಗಿದರೆ ಸರಕಾರಕ್ಕೂ ಹಾಗೂ ಜನಸಾಮಾನ್ಯರಿಗೂ ಅನುಕೂಲ. ಹಾಗಾಗಿ ಕಾಮಗಾರಿ ವಿಳಂಬದಿಂದ ಇಬ್ಬರಿಗೂ ನಷ್ಟವಾಗಿದೆ.
ಈಗ ಗುತ್ತಿಗೆ ಪಡೆದವರು ಬಹಳ ಉತ್ಸುಕರಾಗಿದ್ದಾರೆ. ಜನನಾಯಕರ ಮಾತಿಗೆ ಬೆಲೆ ನೀಡಿ ಅವರು ಕೇಳಿದ ಸಮಯ ನೀಡಲಾಗುತ್ತಿದೆ. ನೀವು ಬೇಗ ನಮಗೆ ಜಾಗ ಬಿಟ್ಟುಕೊಟ್ಟರೆ ಬೇಗ ನಿಮಗೆ ಸುಸಜ್ಜಿತ ರಸ್ತೆಯನ್ನು ಬಿಟ್ಟುಕೊಡುತ್ತೇವೆ. ನಾವು ಹಂತ ಹಂತವಾಗಿ ಅಂದರೆ ಕರೆಂಟ್, ಡ್ರೈನೇಜ್, ಸರ್ವಿಸ್ ರಸ್ತೆ ಹೀಗೆ ಕಾಮಾಗಾರಿ ಮಾಡಬೇಕಾಗುತ್ತದೆ ಎಂದರು.
ಈ ವೇಳೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್, ಮುಖಂಡರಾದ ನಾರನಹಳ್ಳಿ ಗೋವಿಂದರಾಜು, ರಾಜಗೋಪಾಲ್, ಪ್ರಕಾಶ್, ರಫೀಕ್, ಗ್ರಾಮಪಂಚಾಯತಿ ಅಧ್ಯಕ್ಷ ರಾಮಕೃಷ್ಣಯ್ಯ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

