
ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಿರುವುದು ಸಂತಸದ ವಿಷಯವಾಗಿದ್ದು, ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಅಧಿಕ ಲಾಭ ಪಡೆಯುವ ಮೂಲಕ ಸ್ವಾವಲಂಬಿ ಬದುಕು ನಡೆಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ ತಿಳಿಸಿದರು.

ಪಶುಪಾಲನಾ ಇಲಾಖೆ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಪಶುಪಾಲಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್ ಅವರು ಮಾತನಾಡಿ, ಹೈನುಗಾರಿಕೆಯು ಒಂದು ಉದ್ಯಮವಾಗಿ ಬೆಳೆದಿದ್ದು, ಇದರಲ್ಲಿ ವಿಫುಲ ಅವಕಾಶಗಳಿವೆ ಎಂದರಲ್ಲದೆ, ಹೈನುಗಾರಿಕೆಯನ್ನು ವ್ಯವಸ್ಥಿತವಾಗಿ ಮಾಡುವಂತೆ ಪಶುಪಾಲಕರಿಗೆ ಸಲಹೆ ನೀಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಜಿ.ಎಂ.ನಾಗರಾಜು ಮಾತನಾಡಿ, ಇಲಾಖೆಯ ಆವಿಷ್ಕಾರಗಳಾದ ಲಿಂಗ ನಿರ್ಧರಿತ ವೀರ್ಯನಳಿಕೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಶೇ. 95% ರಷ್ಟು ಹೆಣ್ಣು ಕರುಗಳನ್ನು ಪಡೆಯಲು ತಿಳಿಸಿದರಲ್ಲದೆ, ಅಧಿಕ ಮೇವು ಇಳುವರಿ ನೀಡುವ ಸುಧಾರಿತ ಮೇವು ಬೆಳೆಯಾದ ಸುಬಾಬುಲ್ ನಾರಿ ನಿರ್ಬೀಜ ತಳಿಯನ್ನು ಅಳವಡಿಸಿಕೊಂಡು ಹೈನುಗಾರಿಕೆಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ, ಹೆಚ್ಚಿನ ಲಾಭಂಶ ಪಡೆಯುವಂತೆ ತಿಳಿಸಿದರು.
ಉಪ ನಿರ್ದೇಶಕರ ಕಚೇರಿಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್.ಸಿ.ಎಸ್. ಅವರು ಮಾತನಾಡಿ, ಇಲಾಖೆಯ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಧುನಿಕ ಪಶುಪಾಲನಾ ಪದ್ದತಿಗಳನ್ನು ಅಳವಡಿಸಿಕೊಂಡು ಕರುಗಳನ್ನು ಸಾಕಾಣಿಕೆ ಮಾಡಲು ಹಾಗೂ ರೈತರನ್ನು ಪ್ರೋತ್ಸಾಹಿಸಲು ಮಿಶ್ರತಳಿ ಕರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಭಾಗವಹಿಸಿದ ಒಟ್ಟು 47 ಕರುಗಳ ಪೈಕಿ ಉತ್ತಮವಾಗಿ ಪೋಷಿಸಲಾದ 3 ತಿಂಗಳ ಕರುಗಳು, 3-6 ತಿಂಗಳ ಕರುಗಳು ಹಾಗೂ 6 ತಿಂಗಳಿಂದ 1 ವರ್ಷದವರೆಗಿನ ಕರುಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ಮತ್ತು ಖನಿಜ ಮಿಶ್ರಣ ಪೊಟ್ಟಣಗಳನ್ನು ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಜಿಲ್ಲೆಯ 4 ತಾಲ್ಲೂಕುಗಳಿಂದ ಒಟ್ಟು 17 ಹಸುಗಳು ಭಾಗವಹಿಸಿದ್ದು, ಎರಡು ಹೊತ್ತಿನ ಹಾಲಿನ ಇಳುವರಿಯ ಒಟ್ಟು ತೂಕದ ಮಾನದಂಡವನ್ನು ಪರಿಗಣನೆಗೆ ತೆಗೆದುಕೊಂಡು ಅಂತಿಮವಾಗಿ ಬಹುಮಾನಗಳನ್ನು ಘೋಷಿಸಲಾಯಿತು.
ದೇವನಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ನಾರಾಯಣಪ್ಪ ಅವರ ಹಸು 37.110 ಕಿ.ಲೋ ಹಾಲು ಇಳುವರಿ ನೀಡುವ ಮೂಲಕ ಪ್ರಥಮ ಬಹುಮಾನ 25 ಸಾವಿರ ರೂಪಾಯಿ ನಗದು ಹಾಗೂ ಪಾರಿತೋಷಕ, ಪ್ರಶಸ್ತಿ ಪತ್ರ ಪಡೆಯಿತು. ದೇವನಹಳ್ಳಿ ತಾಲ್ಲೂಕಿನ ಮಾಳಿಗೇನಹಳ್ಳಿ ಗ್ರಾಮದ ಟಿ.ಲೋಕೇಶ್ ಅವರ ಹಸು 35.010 ಕಿ.ಲೋ ಹಾಲು ನೀಡುವ ಮೂಲಕ ದ್ವಿತೀಯ ಬಹುಮಾನ 20 ಸಾವಿರ ರೂಪಾಯಿ ಮತ್ತು ಪಾರಿತೋಷಕ, ಪ್ರಶಸ್ತಿ ಪತ್ರ ಪಡೆದುಕೊಂಡಿತು ಹಾಗೂ ಹೊಸಕೋಟೆ ತಾಲ್ಲೂಕಿನ ಇಟ್ಟಸಂದ್ರ ಗ್ರಾಮದ ರಾಮಚಂದ್ರಪ್ಪ ಅವರ ಹಸು 34.130 ಕಿ.ಲೋ ಹಾಲಿನ ಇಳುವರಿ ನೀಡುವ ಮೂಲಕ ತೃತೀಯ ಬಹುಮಾನ 10 ಸಾವಿರ ರೂಪಾಯಿ ಮತ್ತು ಪಾರಿತೋಷಕ ಪ್ರಶಸ್ತಿ ಪತ್ರ ಪಡೆದುಕೊಂಡಿತು.
ಭಾಗವಹಿಸಿದ ಎಲ್ಲಾ ರಾಸುಗಳ ಮಾಲೀಕರಿಗೆ ಯಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೊಣ್ಣೇಗೌಡ ಅವರಿಂದ ತಲಾ ಒಂದು ಸಾವಿರ ನಗದು ಹಾಗೂ ಪಶುಪಾಲನಾ ಇಲಾಖೆಯಿಂದ ಸಮಾಧಾನಕರ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಸ್ಪರ್ಧೆಯ ಮೊದಲನೇ ಬಹುಮಾನದ ಪ್ರಾಯೋಜಕತ್ವವನ್ನು ಮಾ ಇಂಟಿಗ್ರೇಟರ್ಸ್ ಕಂಪನಿಯ ಮಾಲೀಕರಾದ ಅಶೋಕ್ ಕುಮಾರ್ ಅವರು ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಪಶು ಔಷಧ ಕಂಪನಿಗಳಾದ ಇಂಟಾಸ್, ವಿರ್‍ಬ್ಯಾಕ್ ಮತ್ತು Zydus Cadilla ಅವರು ಭಾಗವಹಿಸಿ ಜಂತುನಾಶಕ ಔಷಧಿ, 5 ಲೀಟರ್‌ನ ಖನಿಜ ಮಿಶ್ರಣ ಟಾನಿಕ್ ಹಾಗೂ 1 ಕೆ.ಜಿ ಪೊಟ್ಟಣಗಳನ್ನು ಭಾಗವಹಿಸಿದ್ದ ಎಲ್ಲಾ ರಾಸುಗಳಿಗೆ ಉಚಿತವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ವಿಶ್ವನಾಥ್, ಡಾ.ಅಂಜಿನಪ್ಪ, ಡಾ.ಎಂ.ಕೆ.ಮಂಜುನಾಥ್, ಡಾ. ಸಿದ್ದಪ್ಪ, ಡಾ.ಮೋಹನ್ ಕುಮಾರ್, ಡಾ.ನಾರಾಯಣಸ್ವಾಮಿ, ಡಾ.ಲೋಕೇಶ್, ಯಲಿಯೂರು ಪಶುಚಿಕಿತ್ಸಾಲಯದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲಾ ಪಶುವೈದ್ಯಾಧಿಕಾರಿಗಳು, ಪಿ.ಎಲ್.ಡಿ ಬ್ಯಾಂಕ್‍ನ ನಿರ್ದೇಶಕ ಜಿ.ಕೆ.ಹನುಮಪ್ಪ, ಯಲಿಯೂರು ಕುರಿ/ಮೇಕೆ ಸಾಕಾಣಿಕೆ ರೈತ ಉತ್ಪಾದಕರ ಸಂಸ್ಥೆಯ ಮುಖ್ಯಸ್ಥ ಹಾಗೂ ಪಂಚಾಯತಿ ಸದಸ್ಯ ಆನಂದ್, ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಯಲಿಯೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಪವಿತ್ರ ಸೋಮಶೇಖರ್, ಸದಸ್ಯರಾದ ಸುನೀಲ್, ಲಕ್ಷ್ಮೀದೇವಮ್ಮ, ನೇತ್ರಾವತಿ ಮಂಜುನಾಥ್, ರೂಪ ಚಿಕ್ಕಣ್ಣ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

