
ದೊಡ್ಡಬಳ್ಳಾಪುರ: ತಾಲೂಕಿನ ಪಚ್ಚಾರಲಹಳ್ಳಿ ಗ್ರಾಮದ ಹೊರವಲಯದಲ್ಲಿನ ತೋಟದ ಮನೆಗೆ ಶನಿವಾರ ರಾತ್ರಿ ನುಗ್ಗಿದ ಚಿರತೆ, ಸೀಮೆ ಹಸುವನ್ನು ಕೊಂದುಹಾಕಿದೆ.

ಪಚ್ಚಾರಲಹಳ್ಳಿ ಗ್ರಾಮದ ರೈತ ಮುತ್ತರಾಯಪ್ಪ ಎನ್ನುವವರು, ತೋಟದಲ್ಲಿ ಮನೆಯಲ್ಲಿ ಹಸುವನ್ನು ಕಟ್ಟಿಹಾಕಿದ್ದು, ಊಟಕ್ಕೆಂದು ಗ್ರಾಮಕ್ಕೆ ಬಂದು ತೆರಳುವ ನಡುವಿನ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಮರಳಿ ತೋಟಕ್ಕೆ ತೆರಳಿದಾಗ ಟಾರ್ಚ್ ಬೆಳಕಿಗೆ ಹೆದರಿ ಚಿರತೆ ಪರಾರಿಯಾಗಿದೆ, ಘಟನೆಯಿಂದಾಗಿ ರೈತ ಮುತ್ತರಾಯಪ್ಪನವರಿಗೆ ಸುಮಾರು 20ಸಾವಿರಕ್ಕು ಹೆಚ್ಚು ನಷ್ಟವಾಗಿದೆ.
ಹೊಂಚು ಹಾಕಿ ದಾಳಿ ಮಾಡುತ್ತಿರುವ ಚಿರತೆ: ಮಾಕಳಿ ದುರ್ಗಕ್ಕೆ ಹೊದಿಕೊಂಡಂತಿರುವ ಬೆಟ್ಟದ ಸಾಲಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮಿತಿಮೀರುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಮಾಕಳಿ ಗ್ರಾಮದ ತೋಟದ ಮನೆಯಲ್ಲಿ ಸಹ ಇದೇ ರೀತಿ ರೈತ ಮನೆಗೆ ಊಟಕ್ಕೆ ತೆರಳಿದ್ದ ವೇಳೆಯೇ ದಾಳಿ ಮಾಡಿ ಕುರಿ-ಮೇಕೆಗಳ ಹತ್ಯೆ ಮಾಡಿತ್ತು. ಅಲ್ಲದೆ ಪದೇ ಪದೇ ಗ್ರಾಮಕ್ಕೆ ನುಗ್ಗಿ ಕೋಳಿ, ನಾಯಿಗಳ ಹೊತ್ತುಯುತ್ತಿರುವುದು ಈ ವ್ಯಾಪ್ತಿಯಲ್ಲಿನ ಗ್ರಾಮಸ್ಥರ ನಿದ್ದೆ ಗೆಡಿಸಿದೆ.
ಪರಿಹಾರ ನೀಡಿ: ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಜಾನುವಾರುಗಳ ಮೇಲೆ ದಾಳಿಮಾಡಿ ಭಕ್ಷಿಸುತ್ತಿರುವುದರಿಂದ ಬಡ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಮುಂದಾಗಬೇಕು ಹಾಗೂ ನಷ್ಟಕ್ಕೊಳಗಾದ ರೈತನಿಗೆ ಪರಿಹಾರ ನೀಡಬೇಕೆಂದು ಗ್ರಾಮಪಂಚಾಯಿತಿ ಸದಸ್ಯೆ ನಾಗರತ್ನರಮೇಶ್ ಒತ್ತಾಯಿಸಿದ್ದಾರೆ. ( ಮೊದಲನೆ ಪೊಟೋ ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

