
ಭಾಗ-೧: ರಾಜ್ಯದೆಲ್ಲೆಡೆ ಹಲವಾರು ‘ಜಾತಿ’ಗಳ ಮುಖಂಡರು ತಮ್ಮ ತಮ್ಮ ಜಾತಿಗಳಿಗೆ ಮೀಸಲಾತಿಗಳನ್ನು ನೀಡಬೇಕು ಅಂತ ಬೀದಿಗಿಳಿದಿದ್ದಾರೆ.

ದುರಂತವೆಂದರೆ, ಇದರ ನೇತೃತ್ವ ವಹಿಸಿರುವುದು ” ಜಾತಿ-ಕುಲಗಳ ಹಂಗಿಲ್ಲದೆ ಎಲ್ಲರನ್ನೂ, ಎಲ್ಲವನ್ನೂ ಸಮಾನವಾಗಿ ಪರಿಗಣಿಸಿ, ಸರ್ವಸಂಗ ಪರಿತ್ಯಾಗಿಗಳಾಗಿ ಸಮ ಸಮಾಜದ ಕಂಕಣ ತೊಟ್ಟು, ಅರಿಷಡ್ವರ್ಗಗಳ ಸಮೀಕರಣದ ಕಾವಿಯೇರಿಸಿ ಧರ್ಮ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ‘ಕೆಲವು’ ಮಠಾಧಿಪತಿಗಳು” ಹಾಗೂ ಜಾತಿ ಬೇಧವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಸೇವೆ ಒದಗಿಸುವೆನೆಂದು ಅಂತಃಕರಣ, ಭಗವದ್ಗೀತೆ, ಸಂವಿಧಾನದ ಮೇಲೆ ಆಣೆ ಪ್ರಮಾಣಗಳನ್ನು ಮಾಡಿ ಜನರಿಂದಲೇ ಆಯ್ಕೆಯಾಗುವ “ಜನಪ್ರತಿನಿಧಿಗಳು”.
ಮೊದಲನೆಯದಾಗಿ ಮಠಾಧಿಪತಿಗಳ ವಿಚಾರಕ್ಕೆ ಬರುವುದಾದರೆ…ಮನುಷ್ಯ ತನ್ನ ಜೀವನದಲ್ಲಿ ಸಹಜವಾಗಿ ಅನುಭವಿಸಬೇಕಾದ ಅರಿಷಡ್ವರ್ಗಗಳನ್ನು ತ್ಯಜಿಸಿ, ಯಾವುದೇ ಭವಬಂಧನಕ್ಕೆ ಒಳಗಾಗದೇ, ತನ್ನ ಎಲ್ಲಾ ರಕ್ತ ಸಂಬಂಧಗಳ ಸಂಕೋಲೆಗಳನ್ನು ಹರಿದುಕೊಂಡು, ಅಗ್ನಿಯ ಅನ್ವರ್ಥ ಪವಿತ್ರವಾದ ಕಾವಿಯನ್ನು ಧರಿಸಿ ಯಾವುದೇ ಜಾತಿಗಳ ಹಂಗಿಲ್ಲದೇ ಲೋಕ ಕಲ್ಯಾಣಕ್ಕೆ ಪಣ ತೊಟ್ಟು
” ಧರ್ಮ ರಕ್ಷಣೆ “ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಇವರು(ಇದು ಜಾತಿಯಾಧಾರಿತರಾದ ಕೆಲವರಿಗೆ ಮಾತ್ರ ಅನ್ವಯ. ಯಾಕೆಂದರೆ ಜಾತಿಬೇಧವಿಲ್ಲದೇ ಅನ್ನ,ಆಶ್ರಯ, ವಿದ್ಯೆ ನೀಡಿ ಜಗತ್ತಿಗೇ ಆದರ್ಶರಾದ ಮಠಾಧಿಪತಿಗಳು ಜನಮಾನಸದಲ್ಲಿ ಸರ್ವದಾ ಪವಿತ್ರರಾಗಿಯೇ ಉಳಿದಿದ್ದಾರೆ).
ಇಂದು ತಮ್ಮ ಆಣೆ ಪ್ರಮಾಣಗಳನ್ನೇ ಮರೆತು ಇಂದು ತಮ್ಮ ತಮ್ಮ ಜಾತಿಗಳ ಹೆಸರಿನಲ್ಲಿ ಬೀದಿಯಲ್ಲಿ ಕುಳಿತು ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ” ಮಠಾಧಿಪತಿ”ಎಂಬ ಕಾರಣ ರಾಜ್ಯದ ಮುಖ್ಯಮಂತ್ರಿಯನ್ನೇ ಬೆದರಿಸುವ ತಂತ್ರ ಮಾಡುತ್ತಿದ್ದಾರೆ.
ಇವರ ಈ ಪ್ರತಿಭಟನೆಗಳಿಂದಾಗಿ ರಾಜ್ಯದ ಜನತೆಗೆ ಕಾವಿಧಾರಿಗಳ ಮೇಲೆ ಭಕ್ತಿಗಿಂತ ಬೇಸರ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಜಾತಿಬೇಧ ಭಾವಿಸದೇ ಸರ್ವ ಜನಾಂಗಕ್ಕೂ ಅನ್ನ,ವಿದ್ಯೆ,ಆಶ್ರಯ ನೀಡಿ ಜಗತ್ತಿಗೇ ಮಾದರಿಯಾಗಿರುವ ಸಿದ್ಧಗಂಗಾ ಶ್ರೀಗಳು ಹಾಗೂ ಕನೇರಿ ಮಠದ ಪೂಜ್ಯರೂ ಸೇರಿದಂತೆ ಧಾರ್ಮಿಕ ಗುರುವರ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ನಮ್ಮಲ್ಲೇ ಜಾತಿ ವೈಷಮ್ಯ ಮೆರೆಯುವ ಬದಲಾಗಿ ಇವರೆಲ್ಲರೂ ನಮ್ಮ ಧರ್ಮದ ಮೇಲೆ ಹಿಂದಿನಿಂದಲೂ ಷಡ್ಯಂತ್ರ ರೂಪಿಸಿ ಮತಾಂತರದ ಮೂಲಕ ನಮ್ಮ ಧರ್ಮವನ್ನು ಅವನತಿಯತ್ತ ಒಯ್ಯಲು ಹಗಲಿರುಳು ಶ್ರಮಿಸುತ್ತಿರುವ ‘ಹಲವು’ ಮಿಷಿನರಿಗಳು ಹಾಗೂ ಮದರಸಾಗಳ ಮೇಲೆ ಒಟ್ಟಾಗಿ ಯುದ್ಧ ಸಾರಿದ್ದರೆ, ನಾವು ಇಂದು ಮತಾಂತರ ನಿಷೇಧ ಕಾನೂನು ಜಾರಿಗೆ ತನ್ನಿ ಎಂದು ಸರ್ಕಾರದ ಮುಂದೆ ಅಲವತ್ತುಕೊಳ್ಳುವ ಹಾಗೂ ಒಬ್ಬ ಶಾಸಕನೇ ತನ್ನ ತಾಯಿಯನ್ನು ದೂರ ಮಾಡಿಕೊಂಡು ತನ್ನದೇ ಹುಟ್ಟೂರಿನಲ್ಲಿ ಕೈಚೆಲ್ಲಿ ಕುಳಿತು ಅಸಹಾಯಕನಾಗಿ ಅಳುವ ದುಃಸ್ಥಿತಿ ಬರುತ್ತಿರಲಿಲ್ಲ.
“ಧರ್ಮವೆಂಬ ಹೆಮ್ಮರಕ್ಕೆ ತನ್ನ ಒಡಲಲ್ಲಿರುವ ಜಾತಿಯೆಂಬ ಕೊಡಲಿಯ ಕಾವೇ ಮೂಲ” ಎಂಬ ಬೆತ್ತಲೆ ಸತ್ಯ ನಮಗೆ ಅರಿವಾಗುವವರೆಗೂ ಧರ್ಮ ರಕ್ಷಣೆ ಅಸಾಧ್ಯ ಎಂಬ ಮಾತನ್ನು ನೆನಪಿಸುತ್ತಾ….ಇಂತಿ ನಿಮ್ಮವ ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

