
ದೊಡ್ಡಬಳ್ಳಾಪುರ: ನ್ಯಾಯಾಲಯಗಳಲ್ಲಿ 2 ವರ್ಷಕ್ಕೂ ಅಧಿಕ ಅವಧಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕುರಿತಂತೆ ಉಚ್ಛ ನ್ಯಾಯಾಲಯದ ನಿಯಮಗಳು ಬದಲಾಗಿದ್ದು, ಪ್ರಕರಣಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಟಿ.ವೆಂಕಟೇಶ್ ನಾಯಕ್ ಹೇಳಿದರು.

ತಾಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ನವೀಕೃತಗೊಂಡಿರುವ ವಕೀಲರ ಸಂಘದ ಹೆರಿಟೇಜ್ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಚ್ಛ ನ್ಯಾಯಾಲಯದ ಸೂಚನೆಯಂತೆ 2 ವರ್ಷಕ್ಕೂ ಹೆಚ್ಚು ಕಾಲದ ಮೊದ್ದಮೆಗಳ ಸ್ಥಿತಿಗಳನ್ನು ಅಪ್‍ಲೋಡ್ ಮಾಡಬೇಕಿದ್ದು, ಕಕ್ಷೀದಾರರಿಗೆ ವಿಳಂಬವಾಗದಂತೆ ಸೂಕ್ತ ಸಮಯದಲ್ಲಿ ಮೊಕದ್ದಮೆಗಳನ್ನು ಇತ್ಯರ್ಥಪಡಿಸಿ ನ್ಯಾಯ ಒದಗಿಸುವುದು ವಕೀಲರ ಕರ್ತವ್ಯವಾಗಿದೆ.
10 ವರ್ಷಗಳಿಗೂ ಹೆಚ್ಚಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಇದೇ ಮಾ.30ರಂದು ಲೋಕ ಅದಾಲತ್ ನಡೆಸಲಾಗುತ್ತಿದ್ದು, ಅದಾಲತ್‍ನಲ್ಲಿ ಎಲ್ಲಾ ವಕೀಲರು ಕ್ರಿಯಾಶೀಲರಾಗಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಿದೆ.
ಅದಾಲತ್‍ಗಳನ್ನು ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಹಿಂದೆ ಮೊದಲ ಸ್ಥಾನದಲ್ಲಿತ್ತು. ಈಗ ಮತ್ತೆ ಮೊದಲ ಸ್ಥಾನಕ್ಕೆ ತರಲು ಶ್ರಮಿಸಬೇಕಿದೆ. ನ್ಯಾಯಾಲಯಗಳಲ್ಲಿ ಸರ್ಕಾರಿ ಅಭಿಯೋಜಕ ಹಾಗೂ ಸಹಾಯಕ ಅಭಿಯೋಜಕರ ಸಮ್ಮುಖದಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ, ಅಭಿಯೋಜಕರು ನ್ಯಾಯಲಯಕ್ಕೆ ಬಂದಾಗ ದಿನಾಂಕ ಮುಂದೂಡುವಂತೆ ಮನವಿ ಮಾಡುವುದು ಬೇಡ ಎಂದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ವಕೀಲರಿಗೆ ತಿಳಿಸದೇ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವುದು ನಿಲ್ಲಬೇಕು ಎಂದರು.
ಇತಿಹಾಸ ಹೊಂದಿರುವ ನ್ಯಾಯಾಲಯದ ಕಟ್ಟಡವೀಗ ವಕೀಲರ ಸಂಘದ ಹೆರಿಟೇಜ್ ಸಭಾಂಗಣವಾಗಿ ಮಾರ್ಪಟ್ಟಿರುವುದು ಅರ್ಥಪೂರ್ಣವಾಗಿದೆ. ಇದೇ ರೀತಿ ನೆಲಮಂಗಲ ಹಾಗೂ ಹೊಸಕೋಟೆಗಳಲ್ಲಿ ಸ್ವಂತ ಕಟ್ಟಡಗಳಾಗಬೇಕು. ವಕೀಲರಿಗೆ ಶಿಷ್ಯವೇತನವನ್ನು ಸರ್ಕಾರ ಹೆಚ್ಚು ಮಾಡಬೇಕಿದೆ. ವಕೀಲರಿಗೆ ಹಾಗೂ ಕಕ್ಷೀದಾರರಿಗೆ ಮೂಲ ಸೌಕರ್ಯವನ್ನು ಒದಗಿಸುವುದು ಸರ್ಕಾರದ ಹೊಣೆಯಾಗಿದೆ ಎಂದರು.
ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶರಾದ ಎಂ.ಬಿ.ಕುಲಕರ್ಣಿ ಮಾತನಾಡಿ, ಈ ಹಿಂದೆ ವಕೀಲರ ಸಂಘಗಳು ಎರಡಾಗಿ, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಂಘಗಳನ್ನು ಒಂದುಗೂಡಿಸುವುದನ್ನು ಸವಾಲಾಗಿ ಸ್ವೀಕರಿಸಿ ಸಂಘವನ್ನು ಒಂದು ಮಾಡಲಾಯಿತು. ಈಗ ಸಂಘಗಳು ಒಟ್ಟಾಗಿರುವುದು ಸಂತಸ ತಂದಿದೆ. ವಕೀಲರು ಒಂದೇ ಕುಟುಂಬದಂತೆ ಇದ್ದು, ಸಂಘದ ಮೂಲಕ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಬೈರೇಗೌಡ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ನ್ಯಾಯಾಧೀಶರು ಹಾಗೂ ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು.
ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್.ಎಂ.ಮಂಜುನಾಥ್, ಜಂಟಿ ಕಾರ್ಯದರ್ಶಿ ಬಿ.ಎಸ್.ರೇಖಾ, ಖಜಾಂಚಿ ಎ.ವಿ.ಮುರಳೀಧರ, ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

