
ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕಿನ ಗ್ರಾಮಪಂಚಾಯಿತಿಗಳಲ್ಲಿ ಅನುದಾನ ಸಮರ್ಪಕ ಬಳಕೆ ಕುರಿತು ಮಾಹಿತಿ ನೀಡದ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ನಾಲ್ಕು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ, ಈ ಕುರಿತು ಅವರು ಎಚ್ಚರಿಕೆ ನೀಡಿದ್ದು. ಮಾಹಿತಿ ನೀಡದ ಜಿಲ್ಲೆಯ 102 ಪಿಡಿಒಗಳ ಮೇಲೆ ಶಿಸ್ತು ಕ್ರಮದ ಆತಂಕ ಎದುರಾಗಿದೆ.
ಅಂದಿನ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶೇ.25ರ ಅನುದಾನ ಹಾಗೂ ವಿಕಲಚೇತನರ ಶೇ.5ರ ಅನುದಾನದ ಬಳಕೆಯ ಮಾಹಿತಿ ಕೋರಿದ್ದರು. ಆದರೆ ಮಾಹಿತಿ ನೀಡದೆ ಇರುವುದರಿಂದ ಯೋಜನೆಗಳಲ್ಲಿ ಅನುದಾನದ ಬಳಕೆಯ ಅವ್ಯವಹಾರ ಹಾಗೂ ದುರುಪಯೋಗ ಮಾಡಿರುವುದಾಗಿ ಆರೋಪಿಸಿ ಜಿಪಂ ಸಿಇಒ ಅವರಿಗೆ ತನಿಖೆ ನಡೆಸಿ ಪಿಡಿಒಗಳ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿಇಒ ರವಿಕುಮಾರ್ ಅವರು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಅನುದಾನ ಬಳಕೆ ಕುರಿತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮತ್ತು ಇತರೆ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ಪರಿಶೀಲನೆ ನಡೆಸಿ 30 ದಿನಗಳ ಒಳಗಾಗಿ ಸಿಇಒ ಕಚೇರಿಗೆ ವಿವರವಾದ ಮಾಹಿತಿ ಸಲ್ಲಿಸಲು ಸೂಚನೆ ನೀಡಿದ್ದರು ವರದಿ ಸಲ್ಲಿಕೆಯಾಗಿಲ್ಲ. ಈ ಕಾರಣ ಮತ್ತೆ ಮೂರು ದಿನಗಳ ಕಾಲ ಅವಕಾಶ ನೀಡಿದ್ದು, ಸಮರ್ಪಕ ಉತ್ತರ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

