
ಬೆಂಗಳೂರು: ಕಳೆದ 10 ದಿನಗಳಿಂದ ಕೋವಿಡ್-19 ಸೋಂಕಿನ ಮುಂಜಾಗ್ರತಾ ದೃಷ್ಟಿಯಿಂದ ರಾಜ್ಯದಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಹಾಗೂ ಮಾಸ್ಕ್ ಕಡ್ಡಾಯಗೊಳಿಸುವುದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೊತೆ ವೀಡಿಯೋ ಸಂವಾದದಲ್ಲಿ ಭಾಗವಹಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿಯವರು ವೀಡಿಯೋ ಕಾನ್ಫರೆನ್ಸ್ ನಡೆಸಿದ್ದು, ಜನರಲ್ಲಿ ಭಯ ಸೃಷ್ಟಿಸುವ ಅಗತ್ಯವಿಲ್ಲ. ಲಸಿಕೆ ತಯಾರಿಕೆಗೆ ಎಲ್ಲ ಅವಕಾಶಗಳ ಬಳಕೆಗೆ ರಾಜ್ಯಗಳು ಸಹಕಾರ ಕೊಡುವಂತೆ ಕೇಳಿಕೊಂಡರು.ಅಲ್ಲದೆ ಕರೊನಾ ಬಗ್ಗೆ ಜನ ಜಾಗೃತಿ ಮೂಡಿಸುವಂತೆ ತಿಳಿಸಿದ್ದಾರೆ ಎಂದರು.
ಟೆಸ್ಟ್, ಟ್ರ್ಯಾಕ್, ಟ್ರೀಟ್ ಈ ಮೂರು ಟಿಗಳ ಬಗ್ಗೆ ಪ್ರಧಾನಿಗಳು ಒತ್ತಿ ಹೇಳಿದ್ದು, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದರು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಮೈಕ್ರೋ ಕಂಟೈನ್ಮೆಂಟ್ ಝೋನ್ಗಳನ್ನು ಮಾಡುವಂತೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಪರೀಕ್ಷೆ ಹೆಚ್ಚಿಸುವ ಅಗತ್ಯವಿದೆ. ಹೆಚ್ಚು ಜನ ಸೇರುವ ಕಡೆ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪುಗೂಡದಂತೆ ತಡೆಯಲು ಕ್ರಮ ವಹಿಸಲು ಪ್ರಧಾನಿ ಸೂಚಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಜನ ಸೇರುವ ಕಾರ್ಯಕ್ರಮಗಳಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯ. ಬಹಿರಂಗ ಕಾರ್ಯಕ್ರಮಗಳಿಗೆ ಜನಮಿತಿ ಹೊರತುಪಡಿಸಿ, ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

