
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತ ಪ್ರಕರಣಗಳ ದರ ಹೆಚ್ಚಾಗಿದ್ದು, ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್‌ನ ಕಡ್ಡಾಯ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್-19ರ ಎರಡನೇ ಅಲೆ ನಿಯಂತ್ರಿಸುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದ್ದಾರೆ.

ಇದುವರೆಗೂ ಜಾಗ್ರತೆ ವಹಿಸಿದ್ದ ಜಿಲ್ಲೆಯ ಜನತೆ ಇದೀಗ ಮೈ ಮರೆತು ಕೋವಿಡ್-19 ನಿಯಮ ಪಾಲಿಸದಿದ್ದಲ್ಲಿ, ಇಷ್ಟು ದಿನದ ಪ್ರಯತ್ನ ವ್ಯರ್ಥವಾದಂತಾಗುತ್ತದೆ. ಆದುದರಿಂದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲಿಸುವುದು ಮತ್ತು ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲೆಯ ಜನತೆ ಕೈಜೋಡಿಸಬೇಕು.
ಜಿಲ್ಲೆಯ ಜನತೆ ಮದುವೆ ಮತ್ತಿತರ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳನ್ನು ನಡೆಸುವ ಹಾಗೂ ಭಾಗವಹಿಸುವ ಸಂದರ್ಭ ಸರ್ಕಾರ ನಿಗದಿಪಡಿಸಿರುವ ಕೋವಿಡ್-19ರ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಹೆಚ್ಚು ಜನಸಂದಣಿ ಸೇರದಂತೆ ಗಮನಹರಿಸಬೇಕು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ.
ಪ್ರಸ್ತುತ 60 ವರ್ಷ ಮೇಲ್ಪಟ್ಟವರು ಹಾಗೂ 45-59 ವರ್ಷದ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡ, ಶ್ವಾಸಕೋಶ, ಮೂತ್ರ್ರಪಿಂಡ, ಯಕೃತ್(Liver) ಸಂಬಂಧಿಸಿದ ಖಾಯಿಲೆ ಹಾಗೂ ಇತರೆ ದೀರ್ಘಾವಧಿ ಖಾಯಿಲೆಗಳಿಂದ ಬಳಲುತ್ತಿರುವ ನಾಗರೀಕರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಫಲಾನುಭವಿಗಳು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ಪಡೆದು ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಫಲಾನುಭವಿಗಳು ಸ್ವಯಂ ಪ್ರೇರಿತರಾಗಿ ಆನ್‌ಲೈನ್ ಮುಖಾಂತರ ಲಸಿಕೆಗಾಗಿ ನೊಂದಾಯಿಸಿಕೊಳ್ಳಲು ವೆಬ್‍ಸೈಟ್ www.cowin.gov.in (https://selfregistration.cowin.gov.in/) ಅನ್ನು ಬಳಸಿಕೊಳ್ಳಬಹುದು ಅಥವಾ ಫಲಾನುಭವಿಗಳು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ ಸಿಂಬ್ಬಂದಿಗಳನ್ನು ಸಂಪರ್ಕಿಸಿ ಸ್ಥಳದಲ್ಲಿಯೇ (On spot Registration) ನೋಂದಣಿ ಮಾಡಿಸಿಕೊಳ್ಳುವ ಮೂಲಕ ಲಸಿಕೆ ಪಡೆಯಬಹುದು.
ಕೋವಿಡ್-19 ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಭಯಪಡದೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ವೈದ್ಯರ ಸಲಹೆಗಳನ್ನು ಪಾಲಿಸುವ ಮೂಲಕ ತಮ್ಮ ಕುಟುಂಬ ಮತ್ತು ಹತ್ತಿರದವರನ್ನು ರಕ್ಷಿಸಬೇಕು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಸಮುದಾಯ ಆರೋಗ್ಯ ಕೇಂದ್ರ ವಿಜಯಪುರ, ನೆಲಮಂಗಲ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ಹಾಗೂ ಇತರೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಹಾಗೂ ಖಾಸಗಿ ಆಸ್ಪತ್ರೆಗಳಾದ ದೇವನಹಳ್ಳಿಯ ಆಕಾಶ್ ಆಸ್ಪತ್ರೆ, ರಾಮಯ್ಯ ಲೀನಾ ಆಸ್ಪತ್ರೆ/ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆ, ನೆಲಮಂಗಲದ ರಾಮಯ್ಯ ಹರ್ಷ ಆಸ್ಪತ್ರೆಗಳಲ್ಲಿಯೂ ಸಹ ಕೋವಿಡ್-19 ಲಸಿಕೆ ಲಭ್ಯವಿದ್ದು, 250/- ರೂ. ಗಳನ್ನು ಪಾವತಿಸಿ ಲಸಿಕೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೋವಿಡ್ ವಾರ್ ರೂಂ ದೂರವಾಣಿ ಸಂಖ್ಯೆ: 080-29569449, ಕೋವಿಡ್-19 ಕಂಟ್ರೋಲ್ ರೂಂ. ದೂರವಾಣಿ ಸಂಖ್ಯೆ: 080-29781021 ಹಾಗೂ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ: 1075 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

