ಬೆಂಗಳೂರು : ಕೇಂದ್ರ ಸರ್ಕಾರ ಮೇ 5ರಂದು ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಲು ಸುಗ್ರಿವಾಜ್ಞೆ ತರಲು ಸೂಚಿಸಿರುವುದು ರೈತರ ಪಾಲಿನ ಮಾರಕ ನಿರ್ಧಾರ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಈ ರೀತಿ ಆದೇಶ ನೀಡುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅವರು.ರೈತರಿಗೆ ಲಾಭದಾಯಕ ಮಾರುಕಟ್ಟೆ ಒದಗಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂಬ ಕೇಂದ್ರದ ಸ್ಪಷ್ಟೀಕರಣ ‘ಸಿಹಿ ಮಿಶ್ರಿತ ವಿಷ ಗುಳಿಗೆ’. ಎಪಿಎಂಸಿಗಳನ್ನು ನಿಷ್ಕ್ರಿಯಗೊಳಿಸಿ, ಅವುಗಳ ಸ್ಥಾನದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಕೂರಿಸುವುದು ಈ ಸಂಚಿನ ಹಿಂದಿನ ದುರುದ್ದೇಶ. ಬಹುರಾಷ್ಟ್ರೀಯ ಕಂಪೆನಿಗಳ ಒತ್ತಡಕ್ಕೆ ಮಣಿದು ಅವುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ತರುವ ಮೊದಲು ರೈತರ ಜೊತೆ ಚರ್ಚೆ ಮಾಡಬೇಕಾಗಿತ್ತು. ಕೃಷಿ ರಾಜ್ಯದ ಪಟ್ಟಿಯಲ್ಲಿರುವ ಕಾರಣ ಇದನ್ನು ರಾಜ್ಯಗಳ ವಿವೇಚನೆಗೆ ಬಿಡಬೇಕಾಗಿತ್ತು.
ರೈತರ ಬೆಳೆಗಳನ್ನು ಖರೀದಿ ಮಾಡುವ ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ಇಲ್ಲಿಯ ವರೆಗೆ ಎಪಿಎಂಸಿಗಳು ಹೊಂದಿದ್ದ ಅಧಿಕಾರವನ್ನು ಕೇಂದ್ರ ಸರ್ಕಾರ ಸೂಚಿಸಿರುವ ತಿದ್ದುಪಡಿ ಕಿತ್ತುಕೊಳ್ಳಲಿದೆ. ಪ್ರಸ್ತಾಪಿತ ತಿದ್ದುಪಡಿ ಪ್ರಕಾರ ಖಾಸಗಿ ಕಂಪೆನಿಗಳು ಎಪಿಎಂಸಿಯ ಯಾರ್ಡ್ ನ ಒಳಭಾಗದಲ್ಲಿಯೇ ಮಾರುಕಟ್ಟೆಗಳನ್ನು ತೆರೆಯಬಹುದು. ಪ್ರಾರಂಭದಲ್ಲಿ ರೈತರಿಗೆ ಒಳ್ಳೆಯ ಬೆಲೆ ನೀಡಿ ಎಪಿಎಂಸಿಗಳನ್ನೇ ಅಪ್ರಸ್ತುತಗೊಳಿಸಿ ನಂತರ ಮಾರುಕಟ್ಟೆಯಲ್ಲಿ ಆಧಿಪತ್ಯ ಸ್ಥಾಪಿಸಿ ರೈತರನ್ನು ಶೋಷಿಸುವುದು ತಿದ್ದುಪಡಿಯ ದುರುದ್ದೇಶ.
ಪ್ರಸ್ತುತ ಶೇಕಡಾ ಆರರಷ್ಟು ರೈತರು ಮಾತ್ರ ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು, ಶೇ.94ರಷ್ಟು ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಸರ್ಕಾರಕ್ಕಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಖಾಸಗಿಯವರಿಗೆ ಮಾರುಕಟ್ಟೆ ಸ್ಥಾಪನೆಗೆ ಅವಕಾಶ ನೀಡಿ, ಅವುಗಳ ವ್ಯವಹಾರವನ್ನು ನಿಯಂತ್ರಿಸುವ ಅಧಿಕಾರವನ್ನು ಈಗಿನಂತೆ ಎಪಿಎಂಸಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.