ದೊಡ್ಡಬಳ್ಳಾಪುರ : ತಾಲೂಕಿನ ಖಾಸಗಿ ಶಾಲೆಗಳಲ್ಲಿ ಆರಂಭಿಸಿರುವ ಆನ್‌ಲೈನ್ ಶಿಕ್ಷಣವನ್ನು ಪೂರ್ಣ ರದ್ದು ಮಾಡಬೇಕು. ಶಾಲೆಗಳ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಕಾರ್‍ಯದರ್ಶಿ ರಾಜಘಟ್ಟ ರವಿ, ಕೊವಿಡ್-19 ಸೋಂಕು ದೇಶದಾದ್ಯಂತ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ವರ್ಗದ ಜನರೂ ಸಹ ಸಂಕಷ್ಟ ಎದುರಿಸುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಶಾಲೆ ಶುಲ್ಕ ಕಟ್ಟಲು ಪರದಾಡುವಂತಾಗಿದೆ. ಈ ಸಮಯದಲ್ಲಿ ಕೆಲವು ಶಾಲೆಗಳು ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಪೋಷಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈಗ ಸರ್ಕಾರ 1ರಿಂದ 7ರವರೆಗೆ ಆನ್‌ಲೈನ್ ಶಿಕ್ಷಣ ರದ್ದು ಮಾಡಿರುವುದು ಸ್ವಾಗತಾರ್ಹ ಇದು 10ನೇ ತರಗತಿಯವರೆಗೂ ವಿಸ್ತರಿಸಬೇಕು. ಶಾಲಾ ಶುಲ್ಕದಲ್ಲಿ ಶೆ.25ರಷ್ಟು ಶಾಲಾ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು, ಪೋಷಕರ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರಬಾರದು. ಈ ನಿಟ್ಟಿನಲ್ಲಿಖಾಸಗಿ ಶಾಲೆಗಳ ಆಡಳಿತ ಮಂಡಲಿ ಸಭೆ ಕರೆಯಬೇಕು ಎಂದರು.
ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ,ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವುದು ಈಗ ಅನಿವಾರ್ಯವಾದರೂ ಸಹ, ದೂರದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗಿ ಬರೆಯಲು ಕಷ್ಟವಾಗುವುದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಕ್ಷೇತ್ರಶಿಕ್ಷಣಾಕಾರಿ ಬೈಯಪ್ಪರೆಡ್ಡಿ, ತಾಲೂಕಿನಲ್ಲಿ ಶಾಲೆಗಳಲ್ಲಿ ಕೊವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪೋಷಕರಿಗೆ ಶಾಲೆಯ ಬಗ್ಗೆ ವಿಶ್ವಾಸ ಹೆಚ್ಚಿಸಿ, ಹಂತ ಹಂತವಾಗಿ ಆರಂಭಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಆನ್‌ಲೈನ್ ತರಗತಿ ನಡೆಸದಂತೆ ಇಲಾಖೆಯ ನಿರ್ದೇಶನವಿದ್ದು, ಸದ್ಯಕ್ಕೆ ಯಾವುದೇ ಶಾಲೆಗಳಲ್ಲಿ ಆನ್‌ಲೈನ್ ತರಗತಿ ನಡೆಸುತ್ತಿರುವ ಬಗ್ಗೆ ದೂರುಗಳು ಇಲ್ಲ. ಶುಲ್ಕ ಹೆಚ್ಚಳ ಮಾಡಿ ಪೋಷಕರನ್ನು ಶೋಷಿಸುವ ದೂರುಗಳು ಬಂದರೆ ಹಾಗೂ ಇಲಾಖೆಯ ನಿಯಮಗಳನ್ನು ಮೀರುವ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.ಜೂ.25ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು,ಮಾರ್ಗಸೂಚಿಗಳಂತೆ ಕೊವಿಡ್-19 ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ, ಗೌರವ ಅಧ್ಯಕ್ಷ ಪು.ಮಹೇಶ್,ಕಾನೂನು ಸಲಹೆಗಾರ ಆನಂದ್ ಕುಮಾರ್,ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು,ಕಾರ್ಯದರ್ಶಿ ಜೋಗಿಹಳ್ಳಿಅಮ್ಮು,ನಗರ ಅಧ್ಯಕ್ಷ ಬಷೀರ್,ಕಾರ್ಯದರ್ಶಿ ಸುಬ್ಬಣ್ಣ,ಕಾರ್ಮಿಕ ಘಟಕದ ಅಧ್ಯಕ್ಷ ರಮೇಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಹೇಮಂತ್,ಮುಖಂಡರಾದ ಕೆ.ಆರ್.ಮಂಜುನಾಥ್, ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.