ದೊಡ್ಡಬಳ್ಳಾಪುರ: ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಶ್ರಮಿಸುತ್ತಿರುವ,ಕರೊನಾ ವಾರಿಯರ್ಸ್‌ಗಳಾದ ಪೊಲೀಸರಿಗೂ ಕರೊನಾ ಆತಂಕ ಶುರುವಾಗಿದ್ದು,ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಹಾಗೂ ಹೊಸಹಳ್ಳಿ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಿ,ಎರಡು ದಿನಗಳ ಸೀಲ್ಡೌನ್ ಮಾಡಲು ಚಿಂತಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಹಿರಿಯ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ತಾಲೂಕಿನಲ್ಲಿ ಇಂದು ಕರೊನಾ ಪ್ರಕರಣ ದೃಢ ಪಟ್ಟಿದೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ್ ವರದಿ ತಿಳಿಸಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಬುಲೆಟಿನಲ್ಲಿ ಇಂದು 4 ಮಂದಿ ಪುರುಷರು ಹಾಗೂ 4ಮಂದಿ ಮಹಿಳೆಯರು ಸೇರಿ ಎಂಟು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ ಸಂಜಯ ನಗರ 1, ವೀರಭದ್ರಯ್ಯನಪಾಳ್ಯ 1, ಮೊದಲ ವಾರ್ಡ್ ಟ್ಯಾಂಕ್ ರೋಡ್ 1, ಹೇಮಾವತಿ ಪೇಟೆ 1, ಗ್ರಾಮಾಂತರ ಪೊಲೀಸ್ ಕ್ವಾಟ್ರಸ್ 1, ದರ್ಗಾಜೋಗಹಳ್ಳಿ 1 ಕರೊನಾ ಸೋಂಕು ದೃಢಪಟ್ಟಿದೆ.
ಮಂಗಳವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 205 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,ಏಳು ಮಂದಿ ಮೃತ ಪಟ್ಟಿದ್ದರೆ,ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 51 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 141 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.